ನ್ಯೂಸ್ ನಾಟೌಟ್: ಚಾಟ್ ಜಿಪಿಟಿ, ಡೀಪ್ ಸೀಕ್ ನಂತಹ ಕೃತಕ ಬುದ್ಧಿಮತ್ತೆ ವೆಬ್ ಸೈಟ್ ಮತ್ತು ಆ್ಯಪ್ ಗಳ ಬಳಕೆಯನ್ನು ಹಣಕಾಸು ಸಚಿವಾಲಯ ನಿಷೇಧಿಸಿದೆ. ಸರ್ಕಾರದ ಡೇಟಾ ಹಾಗೂ ಕಡತಗಳ ಸೋರಿಕೆಯನ್ನು ತಡೆಯುವ ನಿಟ್ಟಿನಲ್ಲಿ ಹಣಕಾಸು ಸಚಿವಾಲಯ ಈ ಕ್ರಮಗಳನ್ನು ಕೈಗೊಂಡಿದ್ದು, AI ಭದ್ರತಾ ನೀತಿಗಳನ್ನು ಬಿಗಿಗೊಳಿಸಿದೆ.
ಹಣಕಾಸು ಕಾರ್ಯದರ್ಶಿ ತುಹಿನ್ ಕಾಂತ ಪಾಂಡೆ ಅನುಮೋದನೆಯೊಂದಿಗೆ ಹೊರಡಿಸಲಾದ ಈ ನಿರ್ದೇಶನ ಸಚಿವಾಲಯದ ಜಾಲದಲ್ಲಿ ಬಳಸಲಾಗುವ ಎಲ್ಲಾ AI-ಚಾಲಿತ ಅಪ್ಲಿಕೇಶನ್ಗಳಿಗೆ ಅನ್ವಯಿಸುತ್ತದೆ. ಅಂದರೆ ಸರ್ಕಾರಿ ಇಲಾಖೆಗಳ ಡಿವೈಸ್ ಗಳಲ್ಲಿ ಮಾತ್ರ ChatGPT, DeepSeek ಗಳ ಬಳಕೆಗೆ ನಿಷೇಧ ಅನ್ವಯವಾಗುತ್ತದೆ.
ಹಣಕಾಸು ಸೇವೆಗಳ ಇಲಾಖೆ ಸೇರಿದಂತೆ ಸಚಿವಾಲಯದ ಅಡಿಯಲ್ಲಿರುವ ಎಲ್ಲಾ ಇಲಾಖೆಗಳಿಗೆ ಆದೇಶದ ಪ್ರತಿಯನ್ನು ರವಾನಿಸಲಾಗಿದೆ. AI ಟೂಲ್ ಗಳು ಸರ್ಕಾರಿ ಡೇಟಾದ ಗೌಪ್ಯತೆಗೆ ಅಪಾಯವನ್ನುಂಟುಮಾಡುತ್ತವೆ ಎಂದು ಪತ್ರದಲ್ಲಿ ಸ್ಪಷ್ಟವಾಗಿ ಎಚ್ಚರಿಕೆ ನೀಡಲಾಗಿದೆ ಮತ್ತು ಅಧಿಕೃತ ಸರ್ಕಾರಿ ಸಾಧನ(ಕಂಪ್ಯೂಟರ್ ಮುಂತಾದ) ಸಾಧನಗಳಲ್ಲಿ ಅವುಗಳ ಬಳಕೆಯನ್ನು ಮಾಡಬಾರದೆಂದು ಸಲಹೆ ನೀಡಿದೆ. ಎಲ್ಲಾ ಇಲಾಖೆಗಳ ಉದ್ಯೋಗಿಗಳಿಗೆ ನಿರ್ದೇಶನವನ್ನು ಪಾಲಿಸಲು ಸೂಚಿಸಲಾಗಿದೆ ಎಂದು ವರದಿ ತಿಳಿಸಿದೆ.