ನ್ಯೂಸ್ ನಾಟೌಟ್: ಬಿಜೆಪಿಯಲ್ಲಿನ (BJP) ಆಂತರಿಕ ಅಸಮಾಧಾನ ಮುಂದುವರಿದಿದ್ದು, ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್ (Basanagouda Patil Yatnal), ವಿಜಯೇಂದ್ರ ಬಂದು ನನ್ನ ಭೇಟಿ ಆಗುವ ನಾಟಕ ಮಾಡುವುದು ಬೇಡ. ಎಲ್ಲ ಸರಿಯಾಗಿದೆ ಎಂದು ಹೇಳಿ ಹೋಗುವುದು ಬೇಡ. ವಿಜಯೇಂದ್ರ ಮೊದಲು ಏನೇನು ನನಗೆ ಅಡೆತಡೆ ಮಡಿದ್ದಾರೆ ಗೊತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಜಯಪುರ (Vijayapura) ಜಿಲ್ಲೆಗೆ ಬಂದ ಅನುದಾನವನ್ನು ವಾಪಸ್ ಪಡೆದಿದ್ದರು, ಈಗ ಸರಿ ಮಾಡೋಣ ಅಂದ್ರೆ ಆಗಲ್ಲ. ಲೋಕಸಭಾ ಚುನಾವಣೆ ಮುಗಿದ ನಂತರ ಎಲ್ಲಾ ನಿರ್ಧಾರ ಆಗುತ್ತೆ ಎಂದು ಯತ್ನಾಳ್ ತಿಳಿಸಿದ್ದಾರೆ. ಒಟ್ಟಿನಲ್ಲಿ ಬಿ.ವೈ ವಿಜಯೇಂದ್ರ ರಾಜ್ಯಾಧ್ಯಕ್ಷರನ್ನಾಗಿ ಹೈಕಮಾಂಡ್ ಆಯ್ಕೆ ಮಾಡಿದ ಬಳಿಕ ಕೆಲವು ನಾಯಕರುಗಳು ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ ಅದರಲ್ಲಿ ಬಸವನ ಗೌಡ ಪಾಟೀಲ್ ಯತ್ನಾಳ್ ಮುಂಚೂಣಿಯಲ್ಲಿದ್ದಾರೆ.
ನಿನ್ನೆಯಷ್ಟೇ ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarakiholi)ಯನ್ನು ಸದಾಶಿವನಗರದ ನಿವಾಸದಲ್ಲಿ ಭೇಟಿಯಾಗಿ ವಿಜಯೇಂದ್ರ ಮಾತುಕತೆ ನಡೆಸಿದ್ದರು. ಬಳಿಕ ಮಾತಾಡಿದ ವಿಜಯೇಂದ್ರ , ಪಕ್ಷದ ಹಿರಿಯರು ಏನೇ ಹೇಳಿಕೆ ಕೊಟ್ಟರೂ ಅದನ್ನು ಗಂಭೀರವಾಗಿ ಪರಿಗಣಿಸುತ್ತೇನೆ. ಅವರೆಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತೇನೆ. ಯಾರು ಏನೇ ಹೇಳಿಕೆ ಕೊಟ್ಟರೂ ಅದನ್ನು ಅಪಾರ್ಥ ಮಾಡಿಕೊಳ್ಳದೆ, ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಾಜ್ಯಾಧ್ಯಕ್ಷನಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದ್ದರು.