ನ್ಯೂಸ್ ನಾಟೌಟ್: ನೊಯ್ಡಾದಿಂದ ಚಳಿಗಾಲದ ಅಧಿವೇಶನ ನಡೆಯುತ್ತಿರುವ ದಿಲ್ಲಿಯಲ್ಲಿನ ಸಂಸತ್ ಸಂಕೀರ್ಣದವರೆಗೆ ಇಂದು(ನ.2) ಉತ್ತರ ಪ್ರದೇಶ ರೈತರು ತಮ್ಮ ಐದು ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮೆರವಣಿಗೆ ಹಮ್ಮಿಕೊಂಡಿದ್ದಾರೆ. ನೂತನ ಕೃಷಿ ಕಾನೂನುಗಳಡಿ ಪರಿಹಾರ ಮತ್ತು ಪ್ರಯೋಜನಗಳನ್ನು ಒದಗಿಸಬೇಕು ಎಂಬುದು ಅವರ ಆಗ್ರಹವಾಗಿದೆ. ರಸ್ತೆಗಳಲ್ಲಿ ಬ್ಯಾರಿಕೇಡ್ ನಿರ್ಮಿಸಿರುವ ಪೊಲೀಸರು, ಈ ಹಿಂದೆ ರೈತರ ಹೋರಾಟಗಳಲ್ಲಿ ಹಿಂಸಾಚಾರ ನಡೆದ ಕಾರಣ, ದಿಲ್ಲಿ-ಎನ್ಸಿಆರ್ ಮಾರ್ಗದ ಬದಲಾವಣೆ ಸೇರಿದಂತೆ ಹಲವು ಭದ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ.
ಹಳೆಯ ಭೂಸ್ವಾಧೀನ ಕಾಯ್ದೆಯಡಿ ನಮಗೆ ಶೇ. 10ರಷ್ಟು ಭೂಮಿಯನ್ನು ಮಂಜೂರು ಮಾಡಬೇಕು ಹಾಗೂ ಶೇ. 64.7ರಷ್ಟು ಹೆಚ್ಚುವರಿ ಪರಿಹಾರ ಒದಗಿಸಬೇಕು ಎಂಬುದು ರೈತರ ಆಗ್ರಹವಾಗಿದೆ. ಹಳೆಯ ಭೂಸ್ವಾಧೀನ ಕಾಯ್ದೆಯನ್ವಯ, ಜನವರಿ 1, 2014ರ ನಂತರ ಸ್ವಾಧೀನ ಪಡಿಸಿಕೊಳ್ಳುವ ರೈತರ ಜಮೀನುಗಳಿಗೆ ಮಾರುಕಟ್ಟೆ ದರಕ್ಕಿಂತ ನಾಲ್ಕು ಪಟ್ಟು ಹೆಚ್ಚು ಪರಿಹಾರ ಹಾಗೂ ಶೇ. 20ರಷ್ಟು ಜಮೀನನ್ನು ರೈತರಿಗೆ ಮಂಜೂರು ನೀಡಬೇಕಾಗುತ್ತದೆ.
ಭೂರಹಿತ ಕೃಷಿಕರ ಮಕ್ಕಳಿಗೆ ಉದ್ಯೋಗ ಹಾಗೂ ಪುನರ್ವಸತಿ ಲಾಭ ಒದಗಿಸಬೇಕು, ಉನ್ನತಾಧಿಕಾರ ಸಮಿತಿ ಅಂಗೀಕರಿಸಿರುವ ವಿಷಯಗಳ ಬಗ್ಗೆ ಸರಕಾರಿ ಆದೇಶಗಳನ್ನು ಹೊರಡಿಸಬೇಕು, ಜನವಸತಿ ಪ್ರದೇಶಗಳಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದೂ ಅವರು ಬೇಡಿಕೆ ಮುಂದಿಟ್ಟಿದ್ದಾರೆ.
ಪ್ರತಿಭಟನಾ ನಿರತ ರೈತರು ಭಾರತೀಯ ಕಿಸಾನ್ ಪರಿಷತ್ ಹಾಗೂ ಕಿಸಾನ್ ಮಝ್ದೂರ್ ಮೋರ್ಚಾ, ಸಂಯುಕ್ತ ಕಿಸಾನ್ ಮೋರ್ಚಾ ಸೇರಿದಂತೆ ಇನ್ನಿತರ ಸಹ ಗುಂಪುಗಳಿಗೆ ಸೇರಿದ್ದಾರೆ. ಪ್ರತಿಭಟನೆಯ ನೇತೃತ್ವವನ್ನು ಭಾರತೀಯ ಕಿಸಾನ್ ಪರಿಷತ್ ನ ನಾಯಕ ಸುಖಬೀರ್ ಖಲೀಫಾ ವಹಿಸಲಿದ್ದು, ಇಂದು ಮಧ್ಯಾಹ್ನ 12 ಗಂಟೆಗೆ ನೊಯ್ಡಾದ ಮಹಾಮಾಯ ಫ್ಲೈಓವರ್ ಬಳಿಯಿಂದ ದಿಲ್ಲಿಯ ಕಡೆಗೆ ರೈತರು ಕಾಲ್ನಡಿಗೆ ಹಾಗೂ ಟ್ರ್ಯಾಕ್ಟರ್ ಗಳಲ್ಲಿ ಮೆರವಣಿಗೆ ಹೊರಡಲಿದ್ದಾರೆ.
ಗೌತಮ್ ಬುದ್ಧ್ ನಗರ್, ಆಗ್ರಾ, ಆಲಿಗಢ ಹಾಗೂ ಬುಲಂದ್ ಶಹರ್ ಸೇರಿದಂತೆ ಒಟ್ಟು 20 ಜಿಲ್ಲೆಗಳಿಂದ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ.
Click