ನ್ಯೂಸ್ ನಾಟೌಟ್: ಕದಿಯಲು ಬಂದ ಕಳ್ಳನೊಬ್ಬ ಸಿಸಿಟಿವಿ, ಡಿವಿಆರ್ ಕಿತ್ತು ವಾಪಸ್ ಹೋಗುವಾಗ ಮರೆವಿನಿಂದ ಅದನ್ನು ಅಂಗಡಿಯಲ್ಲೇ ಬಿಟ್ಟು ಹೋದ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ.
ತೊಕ್ಕೊಟ್ಟು ಒಳಪೇಟೆ ಮತ್ತು ಜಪ್ಪಿನ ಮೊಗರುವಿನ ವಾಣಿಜ್ಯ ಮಳಿಗೆಗಳಲ್ಲಿ ಸರಣಿ ಕಳ್ಳತನ ನಡೆದಿದ್ದವು. ಸಿಸಿಟಿವಿ ಡಿವಿಆರ್ ಅನ್ನು ಕಿತ್ತ ಕಳ್ಳ ಅದನ್ನೇ ಮರೆತು ಅಂಗಡಿಯಲ್ಲೇ ಬಿಟ್ಟು ಹೋಗಿದ್ದು ಕಳ್ಳನ ಕರಾಮತ್ತಿನ ವಿಡಿಯೋ ಪೊಲೀಸರಿಗೆ ಲಭಿಸಿದೆ.
ತೊಕ್ಕೊಟ್ಟು ಒಳ ಪೇಟೆಯ ಲಕ್ಷ್ಮೀ ಕ್ಯಾಂಟೀನ್ ,ಪಕ್ಕದ ಪಾತ್ರೆಯ ಅಂಗಡಿ ಮತ್ತು ಮೊಬೈಲ್ ಅಂಗಡಿಗಳಲ್ಲಿ ಕಳ್ಳತನ ನಡೆದಿದ್ದು ನಗದನ್ನ ದೋಚಲಾಗಿತ್ತು. ಪಾತ್ರೆಯ ಅಂಗಡಿಗೆ ಕಳ್ಳನೋರ್ವ ಕನ್ನ ಹಾಕುವ ದೃಶ್ಯ ಒಳಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮೇಲ್ಛಾವಣಿಯ ಹಂಚು ಸರಿಸಿ ಒಳ ನುಸುಳಿದ ಚಾಣಾಕ್ಷ ಕಳ್ಳ ಮೊದಲಿಗೆ ಸಿಸಿಟಿವಿ ಇರೋದನ್ನ ಗಮನಿಸಿದ್ದು ವಿಡಿಯೋ ದಾಖಲಾಗುವ ಹಾರ್ಡ್ ಡಿಸ್ಕ್ ಇರುವ ಡಿವಿಆರನ್ನೇ ಮೊದಲಿಗೆ ಕಿತ್ತು ಮೇಜಿನ ಮೇಲಿರಿಸಿದ್ದಾನೆ. ಒಳಗಿದ್ದ ಸುಮಾರು ಐದು ಸಾವಿರ ನಗದನ್ನ ಎಗರಿಸಿದ ನಂತರ ಡಿವಿಆರ್ ಅನ್ನು ಮರೆತು ಅಲ್ಲೇ ಬಿಟ್ಟು ಹೋಗಿದ್ದಾನೆ. ಪಕ್ಕದ ಲಕ್ಷ್ಮೀ ಕ್ಯಾಂಟೀನ್ಗೂ ಕನ್ನ ಹಾಕಿದ್ದು ಸಿಕ್ಕಿದ 500 ರೂಪಾಯಿ ನಗದನ್ನ ಎಗರಿಸಿದ್ದಾನೆ. ಮೊಬೈಲ್ ಅಂಗಡಿಯಲ್ಲಿ ನಗದು ಸಿಗದೆ ಹೆಡ್ ಫೋನ್ ಗಳನ್ನ ಕಳವು ಮಾಡಿದ್ದಾನೆ.
ಬಳಿಕ ಕಂಕನಾಡಿ ನಗರ ಠಾಣಾ ವ್ಯಾಪ್ತಿಯ ಜಪ್ಪಿನ ಮೊಗರುವಿನ ಟೈಲ್ಸ್ ಅಂಗಡಿಗೂ ಕನ್ನ ಹಾಕಲಾಗಿದ್ದು ಸುಮಾರು 6000 ನಗದನ್ನ ದೋಚಿದ್ದಾನೆ. ಪೊಲೀಸರು ಸಿಸಿಟಿವಿ ಫೂಟೇಜ್ ಅನ್ನು ಪರಿಶೀಲಿಸುತ್ತಿದ್ದಾರೆ. ಸಿಸಿಟಿವಿಯಲ್ಲಿ ಸೆರೆಯಾಗಿರುವ ಕಳ್ಳ ಹೊರರಾಜ್ಯದ ವಲಸಿಗನೆಂದು ತಿಳಿದು ಬಂದಿದ್ದು ಒಬ್ಬನೇ ಸರಣಿ ಕಳ್ಳತನ ನಡಸಿದ್ದಾನೆಯೇ ಅಥವಾ ಗ್ಯಾಂಗ್ ಇದೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.