ಕೊಡಗು

ಮಡಿಕೇರಿ: ಪ್ರಾಣ ಪಣಕ್ಕಿಟ್ಟು ಜೀವ ರಕ್ಷಿಸಿದ ಬಾಲಕ-ಬಾಲಕಿ

ನ್ಯೂಸ್ ನಾಟೌಟ್ : ಕೆಲವು ಸಲ ಮಕ್ಕಳು ತಮ್ಮ ವಯಸ್ಸಿಗೆ ಮೀರಿದ ಸಾಧನೆ ಮಾಡುತ್ತಾರೆ. ಆಗ ಅವರನ್ನು ಅಸಾಮಾನ್ಯರು ಎಂದು ಕರೆಯುತ್ತೇವೆ. ಅಂತಹ ಸಾಧನೆಯನ್ನು ಕೊಡಗಿನ ಇಬ್ಬರು ಮಕ್ಕಳು ಮಾಡಿ ಇದೀಗ ಸುದ್ದಿಯಾಗಿದ್ದಾರೆ.

ಗೋಣಿಕೊಪ್ಪಲಿನ ಸೀಗೆತೋಡು ನಿವಾಸಿ ಶಬರೀಶ್ ಹಾಗೂ ಶಾಂತಿ ಅವರ ಪುತ್ರಿ ನಮ್ರತಾ ಪ್ರಸಕ್ತ ಸಾಲಿನ ರಾಜ್ಯಮಟ್ಟದ ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ ಪಡೆದರೆ ಶನಿವಾರ ಸಂತೆಯ ಕೂಡ್ಲೂರು ಗ್ರಾಮದ ಕೆ.ಆರ್‌.ದೀಕ್ಷಿತ್ ಹೊಯ್ಸಳ ಶೌರ್ಯ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಕಳೆದ ವರ್ಷ ನ.6ರಂದು ತರಗತಿ ಮುಗಿಸಿಕೊಂಡು ವಾಪಸ್ ಮನೆಯತ್ತ ತೆರಳುತ್ತಿದ್ದ ನಮ್ರತಾಗೆ ಸೀಗೆತೋಡಿನ ಸೇತುವೆ ಬಳಿ ಭೀಮಕಾಯದ ವ್ಯಕ್ತಿಯೊಬ್ಬರು ತುಂಬಿದ್ದ ಕೆರೆಯಲ್ಲಿ ಮುಳುಗುತ್ತಿದ್ದ ದೃಶ್ಯ ಕಂಡು ಬಂತು. ಕಾಲಿನಲ್ಲಿದ್ದ ಶೂ ಕಳಚಿ, ಬ್ಯಾಗನ್ನು ದಡದಲ್ಲಿಟ್ಟ ನಮ್ರತಾ ಸಮವಸ್ತ್ರದಲ್ಲೇ ನೀರಿಗೆ ಹಾರಿದ್ದರು. ಇದನ್ನು ಕಂಡ ಗೆಳತಿಯರು ಸಮೀಪದಲ್ಲೇ ಇದ್ದ ಆಕೆಯ ಮನೆಯವರಿಗೆ ವಿಷಯ ಮುಟ್ಟಿಸಿದರು. ಪೋಷಕರು ಹಾಗೂ ಗ್ರಾಮಸ್ಥರು ಸ್ಥಳಕ್ಕೆ ಬರುವ ಹೊತ್ತಿಗೆ ನಮ್ರತಾ ಮುಳುಗುತ್ತಿದ್ದ ವ್ಯಕ್ತಿಯನ್ನು ರಕ್ಷಿಸಿ, ದಡದತ್ತ ಎಳೆದುಕೊಂಡು ಬರುತ್ತಿದ್ದರು. ಭಾರಿ ತೂಕವಿದ್ದ ವ್ಯಕ್ತಿಯನ್ನು ಕಷ್ಟಪಟ್ಟು ದಡಕ್ಕೆ ಎಳೆದು ತಂದ ಬಾಲಕಿ ಅಷ್ಟಕ್ಕೆ ಸುಮ್ಮನಾಗಲಿಲ್ಲ. ವ್ಯಕ್ತಿಯು ದಡದಲ್ಲಿ ನಿಲ್ಲಿಸಿದ್ದ ಸ್ಕೂಟರ್‌ನಲ್ಲಿದ್ದ ಮೊಬೈಲ್‌ ಫೋನ್‌ ಹುಡುಕಿ, ಅವರು ಕೊನೆಯ ಕರೆ ಮಾಡಿದ ನಂಬರ್‌ಗೆ ಡಯಲ್ ಮಾಡಿದರು. ಅದು ಆ ವ್ಯಕ್ತಿಯ ಮಗನ ಮೊಬೈಲ್‌ ಸಂಖ್ಯೆಯಾಗಿತ್ತು. ಅವರಿಗೆ ವಿಷಯ ಮುಟ್ಟಿಸಿ ಸ್ಥಳಕ್ಕೆ ಬರುವಂತೆ ಹೇಳಿದರು. ಬಳಿಕ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಘಟನೆ ನಡೆದಾದ ನಮ್ರತಾ ಗೋಣಿಕೊಪ್ಪಲುವಿನ ಅರವತ್ತೊಕ್ಲು ಸರ್ವದೈವತಾ ಶಾಲೆಯಲ್ಲಿ ಪ್ರಥಮ ಪಿಯು ಕಲಿಯುತ್ತಿದ್ದರು. ಅವರು ಥ್ರೋಬಾಲ್‌ನಲ್ಲಿ ರಾಜ್ಯ ಜೂನಿಯರ್ ಮತ್ತು ಸೀನಿಯರ್ ತಂಡವನ್ನು ಪ್ರತಿನಿಧಿಸಿ, ಹಲವು ರಾಷ್ಟ್ರಮಟ್ಟದ ಟೂರ್ನಿಯಲ್ಲಿ ಭಾಗವಹಿಸಿದ್ದಾರೆ.

ವರ್ಷದ ಹಿಂದೆ ಕೂಡ್ಲೂರು ಗ್ರಾಮದ ಮನೆಯಲ್ಲಿ ಚಾಲನೆಯಲ್ಲಿದ್ದ ಹಿಟ್ಟಿನ ಗಿರಣಿಯ ಬೆಲ್ಟ್‌ಗೆ ತಾಯಿ ಅರ್ಪಿತಾ ಅವರ ತಲೆಕೂದಲು ಸಿಲುಕಿಕೊಂಡು ಆಕೆ ಜೋರಾಗಿ ಕೂಗಿಕೊಂಡರು. ತಾಯಿ ಕೂಗು ಕೇಳಿ ದೂರದಲ್ಲಿ ಆಟವಾಡುತ್ತಿದ್ದ ಪುತ್ರ ದೀಕ್ಷಿತ್ ಓಡಿ ಬಂದು ಗಿರಣಿಯ ವಿದ್ಯುತ್ ಸ್ವಿಚ್ ಆಫ್ ಮಾಡುವ ಮೂಲಕ ತಾಯಿ ಪ್ರಾಣವನ್ನು ಉಳಿಸಿದ್ದ. ಪ್ರಸ್ತುತ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 3 ನೇ ತರಗತಿ ಓದುತ್ತಿರುವ ದೀಕ್ಷಿತ್ ಓದಿನಲ್ಲೂ ಮುಂದು. ರವಿಕುಮಾರ್– ಅರ್ಪಿತಾ ದಂಪತಿಗೆ ಗಿರಣಿಯ ಬಗ್ಗೆ, ವಿದ್ಯುತ್ ಬಗ್ಗೆ ಏನೂ ತಿಳಿಯದ ಮಗನ ಸಾಹಸ ಹಾಗೂ ಸಮಯ ಪ್ರಜ್ಞೆ ಬಗ್ಗೆ ಬಹಳ ಹೆಮ್ಮೆ. ಬಾಲಕನ ಸಮಯಪ್ರಜ್ಞೆಯನ್ನು ಪರಿಗಣಿಸಿದ ಸರ್ಕಾರ ಆತನಿಗೆ 2021–22ನೇ ಸಾಲಿನಲ್ಲಿ ‘ಹೊಯ್ಸಳ ಶೌರ್ಯ ಪ್ರಶಸ್ತಿ’ ನೀಡಿ ಗೌರವಿಸಿತು.

Related posts

ಮಡಿಕೇರಿ: ಜಮೀನಿನಲ್ಲಿ ಬೀಡುಬಿಟ್ಟ ಕಾಡಾನೆಗಳನ್ನು ಕಾಡಿಗಟ್ಟುವ ಪ್ಲ್ಯಾನ್..! ,ಆ.19 , 20ರಂದು ಸಾರ್ವಜನಿಕರು ಎಚ್ಚರವಾಗಿರುವಂತೆ ಅರಣ್ಯ ಇಲಾಖೆ ಸೂಚಿಸಿದ್ಯಾಕೆ ?

ಕೊಡಗು-ಸಂಪಾಜೆ :ಕಂದಾಯ ಕಚೇರಿ ಉದ್ಘಾಟಿಸಿದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ‌-ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ

ಮಡಿಕೇರಿ : ಮಗನನ್ನೇ ಗುಂಡಿಕ್ಕಿ ಕೊಂದ ತಂದೆ! ಕಾರಣ ನಿಗೂಢ !