Uncategorized

ಶಿವಮೊಗ್ಗದ ಶಂಕಿತ ಉಗ್ರರಿಗೆ ವಿದೇಶಿ ಹಣಕಾಸಿನ ನೆರವು!

ನ್ಯೂಸ್ ನಾಟೌಟ್: ಶಿವಮೊಗ್ಗದಲ್ಲಿ ರಾಷ್ಟ್ರ ಧ್ವಜಕ್ಕೆ ಬೆಂಕಿ ಹಚ್ಚಿದ ಪ್ರಕರಣ ಸೇರಿದಂತೆ ವಿವಿಧೆಡೆ ನಡೆಸಿದ ವಿಧ್ವಂಸಕ ಕೃತ್ಯಗಳಿಗೆ ಸಂಬಂಧಿಸಿದಂತೆ ಶಂಕಿತ ಇಬ್ಬರು ಐಸಿಸ್ ಉಗ್ರರ ವಿರುದ್ಧ ಎನ್‌ಐಎ ಅಧಿಕಾರಿಗಳು ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ಶಂಕಿತ ಉಗ್ರರಿಗೆ ವಿದೇಶದಿಂದ ಕ್ರಿಪ್ಟೋಕರೆನ್ಸಿ ರೂಪದಲ್ಲಿ 1.5 ಲಕ್ಷ ರೂ. ಹಣ ಬಂದಿತ್ತು ಎಂಬ ವಿಚಾರ ಆರೋಪ ಪಟ್ಟಿಯಲ್ಲಿದೆ.

ಶಿವಮೊಗ್ಗದ ಮಾಜ್‌ ಮುನೀರ್‌ ಅಹ್ಮದ್ (23), ಸೈಯದ್ ಯಾಸಿನ್‌ (22) ವಿರುದ್ಧ ಆರೋಪ ಪಟ್ಟಿ ಸಲ್ಲಿಕೆಯಾಗಿದೆ. ಇವರು ದೇಶದ ಐಕ್ಯತೆ ಮತ್ತು ಸಾರ್ವಭೌಮತ್ವಕ್ಕೆ ದಕ್ಕೆ ತಂದಿರುವ ಬಗ್ಗೆ ಮಾಹಿತಿ ಬಯಲಾಗಿದೆ. ಅಲ್ಲದೇ ಶಿವಮೊಗ್ಗದ ತುಂಗಾ ನದಿ ತೀರದಲ್ಲಿ ಮಾತ್ರವಲ್ಲದೆ, ಆಗುಂಬೆ, ವರಾಹಿ ನದಿ ತೀರ ಸೇರಿದಂತೆ 25 ಕಡೆ ಟ್ರಯಲ್ ಬ್ಲಾಸ್ಟ್​ ನಡೆಸಿದ್ದಾರೆ ಎಂದು ಚಾರ್ಜ್​ಶೀಟ್​ನಲ್ಲಿ ಉಲ್ಲೇಖವಾಗಿದೆ.

ಶಿವಮೊಗ್ಗದ ವಾರಾಹಿ ನದಿ ದಂಡೆಯಲ್ಲಿ ಯಾಸಿನ್‌ ಐಇಡಿ ಒಂದರ ಪ್ರಾಯೋಗಿಕ ಸ್ಫೋಟ ನಡೆಸಿದ್ದ. ಅಲ್ಲದೇ ದೇಶ ವಿರೋಧಿ ನಡೆಯನ್ನು ಸಾಬೀತುಪಡಿಸಲು ರಾ‍ಷ್ಟ್ರ ಧ್ವಜ ಸುಟ್ಟು ಹಾಕಿ ಇದರ ವಿಡಿಯೋ ರೆಕಾರ್ಡ್‌ ಮಾಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ ಪ್ರಕರಣದ ಚಾರ್ಜ್‌ ಶೀಟ್‌ ಸಲ್ಲಿಸಿದ್ದು, ಇದರಲ್ಲಿ ವಿದೇಶಿ ಉಗ್ರರ ಸಲಹೆಯಂತೆ ಶಂಕಿತ ಉಗ್ರರು ಕೃತ್ಯವೆಸಗಿದ್ದಾರೆ ಎಂದು ತಿಳಿದು ಬಂದಿದೆ.

ಇದಲ್ಲದೇ ಚಾರ್ಜ್​ಶೀಟ್​​ನಲ್ಲಿ ಕುಕ್ಕರ್ ಬಾಂಬ್​ ಸ್ಫೋಟದ ಪ್ರಮುಖ ಆರೋಪಿ ಶಂಕಿತ ಉಗ್ರ ಶಾರಿಕ್​ ಹೆಸರು ಕೂಡ ಉಲ್ಲೇಖಿಸಲಾಗಿದೆ. ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿದ ಎನ್​ಐಎ ಚಾರ್ಜ್​ಶೀಟ್​​ನಲ್ಲಿ ಹಲವು ಅಂಶಗಳನ್ನು ಉಲ್ಲೇಖಿಸಿದ್ದು, ಮಾಜ್ ಮುನೀರ್​​​, ಯಾಸಿನ್​​ ಇಬ್ಬರೂ ಬಿಟೆಕ್​​​ ಪದವೀಧರರಾಗಿದ್ದು, ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸಿ, ಹಿಂದೂಗಳನ್ನು ಸಂಪೂರ್ಣವಾಗಿ ನಾಶ ಮಾಡುವ ಸಂಚನ್ನು ರೂಪಿಸಿದ್ದರು. ಆಗುಂಬೆ, ವರಾಹಿ ಪ್ರದೇಶಗಳಿಗೆ ಟ್ರಕ್ಕಿಂಗ್ ಹೋಗಿದ್ದ ವೇಳೆ ಇಬ್ಬರು ಜಾಗಗಳ ಬಗ್ಗೆ ಮಾಹಿತಿ ಪಡೆದು ಸ್ಫೋಟಕ್ಕೆ ಸ್ಥಳ ಗುರುತಿಸಿದ್ದರು ಎನ್ನುವ ಮಾಹಿತಿ ತಿಳಿದುಬಂದಿದೆ.

ಇದಲ್ಲದೇ ಇಬ್ಬರೂ ಶಂಕಿತ ಉಗ್ರರು ವೇರ್ ಹೌಸ್, ಮದ್ಯದಂಗಡಿ, ಹಾರ್ಡ್‌ವೇರ್ ಶಾಪ್ ಮತ್ತು ಸಾರ್ವಜನಿಕ ಆಸ್ತಿಪಾಸ್ತಿಯನ್ನು ಹಾಳು ಮಾಡುವ ಹುನ್ನಾರ ರೂಪಿಸಿದ್ದರು. ಶಂಕಿತ ಉಗ್ರ ಶಾರೀಕ್ 2022ರಲ್ಲಿ ಕದ್ರಿ ದೇವಸ್ಥಾನದಲ್ಲಿ ಬಾಂಬ್​ ಸ್ಫೋಟಿಸಲು ಹುನ್ನಾರ ರೂಪಿಸಿದ್ದ. ಆದರೆ ಮಾರ್ಗ ಮಧ್ಯ ರಿಕ್ಷಾದಲ್ಲಿ ಕುಕ್ಕರ್ ಸ್ಫೋಟಗೊಂಡ ಹಿನ್ನೆಲೆಯಲ್ಲಿ ಆತನ ಕೃತ್ಯ ಯಶಸ್ವಿಯಾಗಲಿಲ್ಲ.

Related posts

ಚೆಕ್ ಪೋಸ್ಟ್ ಗಳಲ್ಲಿ ಸಿಸಿಟಿವಿ ಅಳವಡಿಸಿ: ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚನೆ

ಸುಳ್ಯದ ಈ ಶಾಲೆಯ ಶಿಕ್ಷಕರೆಲ್ಲ ಸೇರಿ ಮಾಡಿದ್ರು ಮಾದರಿ ಕೆಲಸ..!

ಬಾತ್ ಟವೆಲ್ ತೊಟ್ಟು ಮೆಟ್ರೋದಲ್ಲಿ ಸುತ್ತಿದ ಯುವತಿಯರು..! ಇಲ್ಲಿದೆ ವೈರಲ್ ವಿಡಿಯೋ