ಕರಾವಳಿಮಂಗಳೂರು

ನಿಷೇಧಿತ ಪ್ರದೇಶದ ವ್ಯಾಪ್ತಿಯಲ್ಲಿ ಮರಳುಗಾರಿಕೆ ನಿಷೇಧ, ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಕೊನೆಗೂ ಕಠಿಣ ಕ್ರಮ

ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಗ್ಗಿಲ್ಲದೆ ಸಾಗುತ್ತಿರುವ ಅಕ್ರಮ ಮರಳುಗಾರಿಕೆ ವಿರುದ್ಧ ಜಿಲ್ಲಾಡಳಿತ ಕಠಿಣ ಕ್ರಮಕ್ಕೆ ಮುಂದಾಗಿದೆ. ಉಳ್ಳಾಲ ತಾಲೂಕಿನ ಪಾವೂರು ಬಳಿಯ ನೇತ್ರಾವತಿ ನದಿಯ ಉಳಿಯ ದ್ವೀಪ ಹಚ್ಚ ಹಸಿರು ಜನ ವಸತಿ ಪ್ರದೇಶದಲ್ಲಿ ಅಕ್ರಮ ಮರಳುಗಾರಿಕೆಯ ವಿರುದ್ಧ ಸ್ಥಳೀಯರ ಪ್ರತಿಭಟನೆಗೆ ಕೊನೆಗೂ ಗೆಲುವು ಸಿಕ್ಕಿದೆ.

ಗಣಿಗಾರಿಕೆಯಿಂದ ಈ ದ್ವೀಪ ವಿನಾಶದ ಅಂಚಿಗೆ ತಲುಪಿತ್ತು. ಮರಳು ದಂಧೆಕೋರರ ಅಟ್ಟಹಾಸಕ್ಕೆ ಸುಮಾರು 80 ಎಕರೆ ಇದ್ದ ದ್ವೀಪ ಪ್ರದೇಶ ಇದೀಗ 40 ಎಕರೆಗೆ ಬಂದು ತಲುಪಿದೆ. ಈ ಅಕ್ರಮ ಮರಳುಗಾರಿಕೆಯ ವಿರುದ್ಧ ಇಲ್ಲಿನ 25ಕ್ಕೂ ಹೆಚ್ಚು ಕುಟುಂಬಗಳು ನಿರಂತರ ಹೋರಾಟ ಮಾಡುತ್ತಾ ಬಂದಿದ್ದರು. ಪ್ರತಿಭಟನೆಗೂ ಬಗ್ಗದಿದ್ದಾಗ ದ್ವೀಪ ನಿವಾಸಿಗಳು ನದಿಯಲ್ಲಿ ಮುಳುಗಿ ಆಡಳಿತ ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೊನೆಗೂ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ಉಳಿಯ ದ್ವೀಪದ ಸುತ್ತಮುತ್ತಲಿನ ಎರಡು ಕಿ.ಮೀ ವ್ಯಾಪ್ತಿಯ ಪ್ರದೇಶದಲ್ಲಿ ಎಲ್ಲ ರೀತಿಯ ಮರಳುಗಾರಿಕೆಯನ್ನು ನಿಷೇಧಿಸಿ ಆದೇಶಿಸಿದೆ. ನಿಷೇಧಿತ ಪ್ರದೇಶದ ವ್ಯಾಪ್ತಿಯಲ್ಲಿ ಸಂಚಾರ ದೋಣಿಗಳ ಹೊರತಾಗಿ ಇತರೆ ಎಲ್ಲ ದೋಣಿ ಅಥವಾ ಯಂತ್ರಗಳ ಮೂಲಕ ಮರಳು ಉತ್ಪನ್ನದ ಸಾಗಾಟ ಮಾಡುವುದನ್ನು ನಿಷೇಧಿಸಲಾಗಿದೆ. ಇದು ಇಲ್ಲಿನ ದ್ವೀಪ ನಿವಾಸಿಗಳ ಹೋರಾಟಕ್ಕೆ ಜಯಸಿಕ್ಕಂತಾಗಿದೆ.

2014ರಲ್ಲಿ ದಕ್ಷಿಣಕನ್ನಡ ಜಿಲ್ಲಾಧಿಕಾರಿಯಾಗಿದ್ದ ಎ.ಬಿ ಇಬ್ರಾಹಿಂ ಉಳಿಯ ಪಾವೂರು ದ್ವೀಪದ ಸುತ್ತಮುತ್ತಲು ಒಂದು ಕಿ.ಮೀ ವ್ಯಾಪ್ತಿಯಲ್ಲಿ ಮರಳುಗಾರಿಕೆ ನಿಷೇಧ ಮಾಡಿ ಆದೇಶ ಹೊರಡಿಸಿದ್ದರು. ಆದರೆ ಅವರ ಆದೇಶವನ್ನು ಗಾಳಿಗೆ ತೂರಿ ನಿರಂತರವಾಗಿ ಅಕ್ರಮ ಮರಳುಗಾರಿಕೆ ಮುಂದುವರಿದುಕೊಂಡೆ ಬಂದಿತ್ತು.

Related posts

ಪುತ್ತೂರು: ಪಕ್ಷೇತರ ಅಭ್ಯರ್ಥಿಯಿಂದ ಬಿಜೆಪಿ ಚಿಹ್ನೆ, ಪ್ರಧಾನಿ ಹೆಸರು ದುರ್ಬಳಕೆ ಆರೋಪ

ಬೆಳ್ತಂಗಡಿ: ಮೂವರು ಮಕ್ಕಳಿಗೆ ವಿದ್ಯುತ್ ತಂತಿ ಸ್ಪರ್ಶ! ಪ್ರಾಣಾಪಾಯದಿಂದ ಪಾರು!

ಮುಸ್ಲಿಂ ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ..! 3 ವರ್ಷದ ಮಗನ ಆಸೆ ಈಡೇರಿಸಿ ಭಾವೈಕ್ಯತೆ ಮೆರೆದ ತಂದೆ-ತಾಯಿ