Uncategorized

8ರಿಂದ ಎಲ್ ಕೆಜಿ, ಯುಕೆಜಿ ಶುರು: ಶಿಕ್ಷಣ ಇಲಾಖೆ ಸುತ್ತೋಲೆ

ಬೆಂಗಳೂರು: ಎಲ್ಲ ಸರ್ಕಾರಿ, ಅನುದಾನಿತ, ಅನುದಾನರಹಿತ ಪ್ರಾಥಮಿಕ ಹಾಗೂ ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ ಇದೇ 8ರಿಂದ ಎಲ್ ಕೆ ಜಿ ಮತ್ತು ಯುಕೆಜಿ ತರಗತಿಗಳನ್ನು ಆರಂಭಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ.ರಾಜ್ಯದಾದ್ಯಂತ ಅಂಗನವಾಡಿ ಕೇಂದ್ರಗಳನ್ನು ಇದೇ 8 ರಿಂದ ಆರಂಭಿಸಲು ನಿರ್ಧರಿಸಿದ ಬೆನ್ನಲ್ಲೇ, ಎಲ್ ಕೆ ಜಿ, ಯುಕೆಜಿ ತರಗತಿಗಳನ್ನು ಆರಂಭಿಸುವುದಕ್ಕೆ ಸಂಬಂಧಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

ಕರೊನಾ ಸೋಂಕು ದೃಢ ಪ್ರಮಾಣ ಶೇ 2ಕ್ಕಿಂತ ಕಡಿಮೆ ಇರುವ ತಾಲ್ಲೂಕುಗಳಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 9.30 ರಿಂದ ಅಪರಾಹ್ನ 3.30 ರವರೆಗೆ ಎಲ್ ಕೆಜಿ, ಯುಕೆಜಿ ತರಗತಿಗಳನ್ನು ನಡೆಸಲು ವೇಳಾಪಟ್ಟಿ ನಿಗದಿಪಡಿಸಿಕೊಳ್ಳಬೇಕು ಎಂದು ಸುತ್ತೋಲೆಯಲ್ಲಿ ಆಯುಕ್ತರು ತಿಳಿಸಿದ್ದಾರೆ. ರಾಜ್ಯದಲ್ಲಿ ಕೋವಿಡ್ ದೃಢ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಕಡಿಮೆ ಆಗಿದೆ. ಹೀಗಾಗಿ, ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ 9 ಮತ್ತು 10ನೇ ತರಗತಿಯನ್ನು ಆಗಸ್ಟ್ 23 ರಿಂದ, 6 ರಿಂದ 8ರವರೆಗಿನ ತರಗತಿಗಳನ್ನು ಸೆ. 6ರಿಂದ ಆರಂಭಿಸಲಾಗಿದೆ. ಅ.4ರಿಂದ 6 ರಿಂದ 10ರವರೆಗಿನ ತರಗತಿಗಳು ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿವೆ. 1ರಿಂದ 5ರವರೆಗಿನ ತರಗತಿಯನ್ನು ಅ.25 ರಿಂದ ಆರಂಭಿಸಿ, ಮೊದಲ ಒಂದು ವಾರ ಅರ್ಧ ದಿನ, ನ. 2ರಿಂದ ಪೂರ್ಣ ಪ್ರಮಾಣದಲ್ಲಿ ನಡೆಸಲಾಗುತ್ತಿದೆ.

ಇದೀಗ ಅಂಗನವಾಡಿ ಕೇಂದ್ರಗಳನ್ನು ಮತ್ತು ಪೂರ್ವ ಪ್ರಾಥಮಿಕ ತರಗತಿಗಳನ್ನು ಆರಂಭಿಸಲು ಸರ್ಕಾರ ತೀರ್ಮಾನಿಸಿದ್ದರಿಂದ, ಶೈಕ್ಷಣಿಕ ಚಟುವಟಿಕೆ ಸಂಪೂರ್ಣವಾಗಿ ಆರಂಭಗೊಂಡಂತಾಗಿದೆ.

ತಪ್ಪದೇ ಸಣ್ಣ ಮಕ್ಕಳಿಗೆ ನಿಯಮ ಪಾಲಿಸಿ

ಮಕ್ಕಳಿಗೆ ಮನೆಯಿಂದಲೇ ಉಪಾಹಾರ ಮತ್ತು ಶುದ್ಧ ಕುಡಿಯುವ ನೀರು ಕಳುಹಿಸುವಂತೆ ಪೋಷಕರಿಗೆ ತಿಳಿಸಬೇಕು. ಅವಶ್ಯಕತೆಗೆ ಅನುಸಾರವಾಗಿ ಎಲ್ಲ ಶಾಲೆಗಳಲ್ಲಿ ಶುದ್ಧ ಬಿಸಿನೀರಿನ ವ್ಯವಸ್ಥೆ ಮಾಡಬೇಕು. ಮಕ್ಕಳ ಹಾಜರಾತಿ ಆಧರಿಸಿ ಪ್ರತಿ ತರಗತಿಯಲ್ಲಿ ಪ್ರತ್ಯೇಕವಾಗಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡುವ ಮೂಲಕ ವೈಯಕ್ತಿಕ ಅಂತರ ಕಾಪಾಡಬೇಕು. ಪರಸ್ಪರ ಒಂದು ಮೀಟರ್ ಅಂತರ ಪಾಲಿಸುವಂತೆಯೂ ಎಚ್ಚರ ವಹಿಸಬೇಕು. ಯಾವುದೇ ವಿದ್ಯಾರ್ಥಿಗೆ ಕೆಮ್ಮು, ಜ್ವರ, ನೆಗಡಿ, ಮೂಗು ಸೋರುವುದು, ಮೈ ಕೈ ನೋವು, ಉಸಿರಾಟ ತೊಂದರೆ, ರುಚಿಮತ್ತು ವಾಸನೆ ಕಳೆದುಕೊಳ್ಳುವ ಲಕ್ಷಣಗಳು ಇದ್ದರೆ ಅಂಥವರನ್ನು ಪ್ರತ್ಯೇಕವಾಗಿ ಕೊಠಡಿಯಲ್ಲಿ ಇರಿಸಿ, ಪೋಷಕರನ್ನು ಸಂಪರ್ಕಿಸಿ ಮನೆಗೆ ಕಳುಹಿಸಬೇಕು ಎಂದೂ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

Related posts

ಪತ್ನಿ ಗರ್ಭಿಣಿಯಾಗುತ್ತಲೇ ಕೈಕೊಟ್ಟು ಓಡಿದ ಪಿಡಿಓ

ಪೋಷಕರು, ಸಾರ್ವಜನಿಕರು ನೇರವಾಗಿ ಶಿಕ್ಷಣ ಸಚಿವರಿಗೆ ದೂರು ಕೊಡಬಹುದು..!

ಮಹಿಳೆಯರಿಗೆ ಟಾಪ್‌ಲೆಸ್‌ ಸ್ವಿಮ್ಮಿಂಗ್‌ ಗೆ ಅನುಮತಿ ನೀಡಿದ ಸರ್ಕಾರ..! ಯಾವುದು ಆ ದೇಶ?