ಕರಾವಳಿ

ಸಂಪಾಜೆ ಗ್ರಾಮ ಪಂಚಾಯತ್ ನಲ್ಲಿ ಬಿರುಗಾಳಿ, ಹೈಡ್ರಾಮಾ..!

ನ್ಯೂಸ್ ನಾಟೌಟ್: ಅಭಿವೃದ್ಧಿ ವಿಚಾರದಲ್ಲಿ ಸಾಕಷ್ಟು ಹೆಸರು ಮಾಡಿದ್ದ ಸಂಪಾಜೆ ಗ್ರಾಮ ಪಂಚಾಯತ್ ನಲ್ಲಿ ಈಗ ಅಸಮಾಧಾನ, ಗೊಂದಲಗಳ ಬಿರುಗಾಳಿಯೇ ಎದ್ದಿದೆ.

ಅಧ್ಯಕ್ಷರ ಬದಲಾವಣೆ ವಿಚಾರವೇ ಎಲ್ಲ ಗೊಂದಲ ಜಟಾಪಟಿಗೆ ವೇದಿಕೆಯಾಗಿ ಪರಿಣಮಿಸಿದೆ. ಹಾಲಿ ಅಧ್ಯಕ್ಷ ಜಿ.ಕೆ.ಹಮೀದ್ ಇಂದು ಸಂಜೆಯೊಳಗೆ ತಮ್ಮ ಹುದ್ಧೆಗೆ ರಾಜೀನಾಮೆ ನೀಡಬೇಕೆಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದ್ದು ಒಟ್ಟಿನಲ್ಲಿ ಈ ಬೆಳವಣಿಗೆ ಭಾರಿ ಕುತೂಹಲ ಕೆರಳಿಸಿದೆ.

ಸೋಮವಾರ ಸುಳ್ಯದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್‌ ಕುಮಾರ್‌ ನೇತೃತ್ವದಲ್ಲಿ ಸಭೆ ನಡೆಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿಸಿ ಜಯರಾಮ್‌, ಪ್ರಧಾನ ಕಾರ್ಯದರ್ಶಿ ಪಿ.ಎಸ್‌. ಗಂಗಾಧರ್, ಸಂಪಾಜೆ ಗ್ರಾಮ ಸಮಿತಿ ಅಧ್ಯಕ್ಷ ಸೋಮಶೇಖರ್ ಕೊಯಿಂಗಾಜೆ ಹಾಗೂ ಜಿ.ಕೆ.ಹಮೀದ್ ಇದ್ದರು ಎನ್ನಲಾಗಿದೆ.

ಸೋಮಶೇಖರ್ ಕೊಯಿಂಗಾಜೆ ಹಮೀದ್ ರಾಜೀನಾಮೆಗೆ ಒತ್ತಾಯಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಹಿಂದೆ ನಡೆದಿರುವ ಒಪ್ಪಂದದಂತೆ ಹಮೀದ್ ರಾಜೀನಾಮೆ ನೀಡಬೇಕು. ಇಲ್ಲವಾದಲ್ಲಿ ನಾವು ಮಾತಿಗೆ ತಪ್ಪಿದಂತಾಗುತ್ತದೆ. ಅವರು ರಾಜೀನಾಮೆ ನೀಡದಿದ್ದರೆ ನಾನು ನನ್ನ ಗ್ರಾಮ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಜಿಲ್ಲಾಧ್ಯಕ್ಷರ ಬಳಿ ಕೊಯಿಂಗಾಜೆ ಹೇಳಿದ್ದಾರೆ, ಆದರೆ ಹಮೀದ್ ಇದಕ್ಕೆ ಕೌಂಟರ್ ನೀಡಿದ್ದು ನನ್ನನ್ನೇ ಮತ್ತೆ ಅಧ್ಯಕ್ಷರಾಗಿ ಮುಂದುವರಿಸಬೇಕು. ಈ ಹಿಂದೆ ಅವರೆಲ್ಲರು ಅನೇಕ ಸಮಸ್ಯೆಗಳನ್ನು ತಂದಿಟ್ಟರೂ ಸಂಪಾಜೆ ಗ್ರಾಮದ ಅಭಿವೃದ್ಧಿಗೆ ಶ್ರಮಿಸಿದ್ದೇನೆ ಎಂದು ತಿಳಿಸಿದ್ದಾರೆ.

ಎರಡು ಕಡೆಗೆ ಅಹವಾಲನ್ನು ಕೇಳಿದ ಜಿಲ್ಲಾಧ್ಯಕ್ಷರು ಜಿ.ಕೆ ಹಮೀದ್ ಅವರಿಗೆ ಇಂದು ಸಂಜೆಯ ವೇಳೆ ನಿಮ್ಮ ರಾಜೀನಾಮೆ ನೀಡಿ, ನನಗೆ ದೂರವಾಣಿ ಮೂಲಕ ಈ ಬಗ್ಗೆ ಖಚಿತಪಡಿಸಿ ಎಂದು ತಿಳಿಸಿದ್ದಾರೆ. ಆದರೆ ಮೂಲಗಳ ಪ್ರಕಾರ ಜಿ,ಕೆ.ಹಮೀದ್ ರಾಜೀನಾಮೆ ನೀಡುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

೨೦೦೬ರಲ್ಲಿ ಮಹಮ್ಮದ್ ಕುಂಞ್ ಅವರು ಜಿಕೆ ಹಮೀದ್ ಅವರಿಗೆ ಅಧಿಕಾರ ಒಪ್ಪಂದ ಮಾಡಿ ಕೊನೆಗೆ ಪಕ್ಷದ ತೀರ್ಮಾನ ಇದ್ದೂ ಬಿಟ್ಟುಕೊಟ್ಟಿರಲಿಲ್ಲ. ಇದೀಗ ಅದೇ ಮಹಮ್ಮದ್ ಕುಂಞ್ ಅವರ ಮಗ ಸವಾದ್ ಅವರಿಗೆ ಅಧಿಕಾರ ಬಿಟ್ಟುಕೊಡುವ ವಿಚಾರದಲ್ಲಿ ಜಿಕೆ ಹಮೀದ್ ಸೇಡು ತೀರಿಸಿಕೊಂಡಿದ್ದಾರೆ ಎನ್ನುವಂತಹ ಮಾತುಗಳು ಕೂಡ ಕೇಳಿ ಬರುತ್ತಿದೆ. ಈ ಹಿಂದೆ ಅಧಿಕಾರ ಬದಲಾವಣೆ ತರುವ ವಿಚಾರ ಕಮ್ಯುನಿಷ್ಟ್ ನಾಯಕ ಹಾಗೂ ಇತರೆ ಐದು ಮಂದಿಯು ಸದಸ್ಯರು ಬಾಯಿ ಮಾತಿನಲ್ಲಿ ಮಾಡಿಕೊಂಡ ಒಪ್ಪಂದವಾಗಿದೆ. ಪಂಚಾಯತ್ ಸದಸ್ಯರ ಸಮ್ಮುಖದಲ್ಲಿ ಯಾವುದೇ ತೀರ್ಮಾನ ಆಗಿಲ್ಲ. ಹೀಗಿರುವಾಗ ಹಮೀದ್ ಅಧಿಕಾರ ಬಿಟ್ಟುಕೊಡುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.

Related posts

ಸುಳ್ಯ :ಎಸ್. ವಿ. ಪ್ರಸಾದ್‌ರಿಗೆ ಡಾಕ್ಟರೇಟ್ ಪದವಿ,ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌ರಿಂದ ಪದವಿ ಪ್ರದಾನ

ಐವರ್ನಾಡು : ಬೆಂಕಿ ತಗುಲಿ ಕಣ್ಣೆದುರೇ ಸುಟ್ಟು ಕರಕಲಾದ ಮನೆ

ಇಂಡಿಗೋ ಸಂಸ್ಥೆಯ ನಿರ್ಲಕ್ಷ್ಯಕ್ಕೆ ಕರಾವಳಿಯ ಪ್ರಯಾಣಿಕರು ಮುಂಬಯಿಯಲ್ಲೇ ಬಾಕಿ!