ನ್ಯೂಸ್ ನಾಟೌಟ್: ಕೋರ್ಟಿನ ಆವರಣದಲ್ಲಿ ಮಹಿಳೆಯೊಬ್ಬರ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ದೆಹಲಿಯ ಸಾಕೇತ್ ಜಿಲ್ಲಾ ನ್ಯಾಯಾಲಯದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ.
ದೆಹಲಿಯ ಸಾಕೇತ್ ಜಿಲ್ಲಾ ಕೋರ್ಟಿನ ಆವರಣದಲ್ಲಿ ವಕೀಲರ ವೇಷದಲ್ಲಿ ಬಂದ ವ್ಯಕ್ತಿಯೊಬ್ಬ ಮಹಿಳೆ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ನಾಲ್ಕು ಸುತ್ತಿನ ಗುಂಡಿನ ದಾಳಿ ನಡೆಸಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಹಣಕಾಸಿನ ವಿವಾದಕ್ಕೆ ಸಂಬಂಧಿಸಿದ ಪ್ರಕರಣವೊಂದರ ವಿಚಾರಣೆಗಾಗಿ ಮಹಿಳೆ ನ್ಯಾಯಾಲಯಕ್ಕೆ ಬಂದಾಗ ವ್ಯಕ್ತಿಯೊಬ್ಬ ಆಕೆಯ ಮೇಲೆ ಗುಂಡು ಹಾರಿಸಿದ್ದಾನೆ ಎಂದು ಹಿರಿಯ ಪೊಲೀಸರು ತಿಳಿಸಿದ್ದಾರೆ.
ಗುಂಡಿನ ದಾಳಿಯ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಮೂಲಗಳ ಪ್ರಕಾರ, ಆರೋಪಿ ಕ್ರಿಮಿನಲ್ ಹಿನ್ನೆಲೆವುಳ್ಳವನಾಗಿದ್ದಾನೆ ಎನ್ನಲಾಗಿದ್ದು, ಸದ್ಯ ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.