ಕೊಡಗು

ಮಡಿಕೇರಿ: ಕಾರ್ಮಿಕರು ಸಿಗದೇ ಕಂಗಾಲಾದ ಮಾಲೀಕನಿಂದ ಭರ್ಜರಿ ಆಫರ್..!ಬೋರ್ಡ್‌ನಲ್ಲಿ ‘ಕೆಲಸಗಾರರು ಬೇಕಾಗಿದ್ದಾರೆ ‘ ಬರೆದ ಫೋಸ್ಟ್ ವೈರಲ್..!

ನ್ಯೂಸ್ ನಾಟೌಟ್ : ಕಳೆದ ನಾಲ್ಕು ವರ್ಷಗಳ ಹಿಂದೆ ಕೊರೋನಾ ಅಬ್ಬರಕ್ಕೆ ಪಟ್ಟಣದಲ್ಲಿ ಸಿಲುಕಿದ್ದ ಜನ ಹಳ್ಳಿಗಳತ್ತ ಮುಖ ಮಾಡಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು.ಇದೀಗ ಮತ್ತೆ ತೋಟದ ಕೆಲಸಗಳಿಗೆ ವಿದಾಯ ಹೇಳಿ ಬೆಂಗಳೂರಿನತ್ತ ಹೆಜ್ಜೆ ಇಡುತ್ತಿದ್ದಾರೆ.ಹೀಗಾಗಿ ಕಾರ್ಮಿಕರು ಸಿಗದೇ ರೈತರು ಕಂಗಾಲಾಗಿದ್ದಾರೆ. ಸೂಕ್ತ ಮಳೆ ಬೆಳೆ ಇಲ್ಲದೇ ಜನರು ಪಟ್ಟಣದತ್ತ ಮುಖ ಮಾಡಿದ್ದಾರೆ. ಹೆಚ್ಚಿನ ವೇತನದ ನಿರೀಕ್ಷೆಯಲ್ಲಿ ಬೆಂಗಳೂರು ಸೇರಿದಂತೆ ಇತರ ಮಹಾನಗರಿಗಳತ್ತ ಗುಳೆ ಹೋಗುತ್ತಿದ್ದಾರೆ.

ತೋಟದ ಕೆಲಸ ಕಾರ್ಮಿಕರ ಕೊರತೆಯೇ ಈಗ ಮಾಲೀಕರಿಗೆ ದೊಡ್ಡ ತಲೆ ನೋವಾಗಿದೆ. ಅಡಿಕೆ ಹಾಗೂ ತೆಂಗಿನ ಕಾಯಿಗಳನ್ನು ಕೀಳುವವರು, ತೋಟ ಸಮತಟ್ಟು ಮಾಡುವವರು, ಸಸಿಗಳನ್ನು ನೆಡುವ ಸಂದರ್ಭದಲ್ಲಿ ಗುಂಡಿಗಳನ್ನು ತೆಗೆಯುವವರು ಹೀಗೆ ಕಾರ್ಮಿಕರು ಬೇಕಾಗಿರುವ ಕೆಲಸಗಳ ಪಟ್ಟಿ ದೊಡ್ಡದಾಗುತ್ತದೆ.ಆದರೆ ಈಗ ಋತುಮಾನಕ್ಕೆ ತಕ್ಕಂತೆ ಸದ್ಯ ಕಾಫಿ ಕೀಳುವ ಕಾರ್ಮಿಕರ ಕೊರತೆ ಉಂಟಾಗಿದೆ. ಸದ್ಯ ಕಾಫಿ ಹಣ್ಣಾಗುವ ಕಾಲ.ಸ್ಪಲ್ಪ ಸಮಯ ಬಿಟ್ಟರೆ ಕಾಫಿ ಹಣ್ಣಾಗಿ ಗಿಡದಿಂದ ಬಿದ್ದು ಹೋಗುತ್ತದೆ.ಹೀಗಾಗಿ ಸೂಕ್ತ ಸಮಯಕ್ಕೆ ಅವುಗಳನ್ನು ಗಿಡದಿಂದ ಕೀಳಬೇಕು.ಆದರೆ ಕಾಫಿ ಕೀಳಲು ಕಾರ್ಮಿಕರು ಸಿಗದೆ ತೋಟದ ಮಾಲೀಕರು ಚಿಂತೆಯಲ್ಲಿದ್ದಾರೆ.

ಹಿಂದೆಲ್ಲಾ ಅಸ್ಸಾಂ, ಬಿಹಾರ್ ಸೇರಿದಂತೆ ಇತರ ರಾಜ್ಯದ ಕಾರ್ಮಿಕರು ಕಾಫಿ ತೋಟದ ಕೆಲಸಕ್ಕೆ ಬರುತ್ತಿದ್ದರು. ಆದರೀಗ ಕಾಫಿ ಕೀಳುವ ಸಮಯದಲ್ಲಿ ಕಾರ್ಮಿಕರ ಸಮಸ್ಯೆಯೇ ಎದುರಾಗಿದೆ. ಅಧಿಕ ಸಂಬಳ ನೀಡಿದರು ಸಹ ಕಾರ್ಮಿಕರ ಅಭಾವವಿದೆ. ಹೀಗಾಗಿ ಕೊಡಗಿನ ತೋಟದ ಮಾಲೀಕರೊಬ್ಬರು ಕಾರ್ಮಿಕರಿಗಾಗಿ ರಸ್ತೆಗಿಳಿದಿದ್ದಾರೆ.ಹೀಗೆ ಬೇಸತ್ತು ಹೋದ ಮಾಲೀಕರೊಬ್ಬರು ಕೊನೆಗೆ ರಸ್ತೆ ಬದಿ ಬಂದು ಕೆಲಸಗಾರರು ಬೇಕು ಎಂದು ಬೋರ್ಡ್​​ ಹಿಡಿದು ನಿಂತ ಫೋಟೋ ಎಲ್ಲೆಡೆ ವೈರಲ್ ಆಗಿದೆ.

ಬೋರ್ಡ್‌ನಲ್ಲಿ ಕೆಲಸಗಾರರು ಬೇಕಾಗಿದ್ದಾರೆ ಎಂದು ದೊಡ್ಡದಾಗಿ ಬರೆಯಲಾಗಿದ್ದು, ಪುರುಷರ ಹಾಗೂ ಮಹಿಳೆಯ ವೇತನವನ್ನು ಕೂಡ ಬೋರ್ಡ್‌ನಲ್ಲಿ ನಮೂದಿಸಿದ್ದಾರೆ.ಮಹಿಳೆಯರ ದಿನದ ವೇತನ 415 ರೂಪಾಯಿ ಹಾಗೂ ಪುರುಷರ ದಿನದ ವೇತನ 615 ರೂಪಾಯಿ ನೀಡಲಾಗುತ್ತದೆ ಎಂದು ಬರೆದಿದ್ದಾರೆ. ಅಷ್ಟೇ ಅಲ್ಲದೇ ನಿಗದಿತ ಸಮಯಕ್ಕಿಂತ ಜಾಸ್ತಿ ಕೆಲಸ ಮಹಿಳೆಯರು ಮತ್ತು ಪುರುಷರಿಗೆ ಹೆಚ್ಚಿನ ಸಂಬಳ ನೀಡುವುದಾಗಿ ಬೋರ್ಡ್‌ನಲ್ಲಿ ಬರೆದುಕೊಂಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

Related posts

ಮಡಿಕೇರಿ:ಕಾಫಿ ತೋಟಗಳಲ್ಲಿ ಪತ್ತೆಯಾದ ಹುಲಿ ಹೆಜ್ಜೆ ಗುರುತುಗಳು..!,ಹುಲಿಯ ಚಲನವಲನ ಪತ್ತೆ ಹಚ್ಚಲು ಕ್ಯಾಮರಾ ಅಳವಡಿಕೆ

ಮಡಿಕೇರಿ: ಚಾರಣಕ್ಕೆ ತೆರಳಿದ್ದ ಯುವಕನಿಗೆ ಹೃದಯಾಘಾತ..! ಬೆಟ್ಟದಲ್ಲೇ ಕುಸಿದು ಬಿದ್ದು ಕೊನೆಯುಸಿರು

ದಟ್ಟಾರಣ್ಯದ ಮಧ್ಯೆ ವಾಮಾಚಾರ ,ಮೂರು ಕೋಳಿ ಬಲಿ:ಸ್ಥಳೀಯರಲ್ಲಿ ಮನೆ ಮಾಡಿದ ಆತಂಕ