ಸಂದರ್ಶನ: ಹರ್ಷಿತಾ ವಿನಯ್
ನ್ಯೂಸ್ ನಾಟೌಟ್: ಮನುಷ್ಯನಿಗೆ ಈಗಿನ ಆಧುನಿಕ ಜೀವನದೊಂದಿಗೆ ಹೋರಾಟ ನಡೆಸುವುದರ ಜೊತೆಗೆ ಕಾಯಿಲೆಗಳ ಜೊತೆಯೂ ಹೋರಾಡಬೇಕಿರುವ ಅನಿವಾರ್ಯತೆ ಇದೆ. ಮನು ಕುಲಕ್ಕೆ ಇಂದು ಹತ್ತು ಹಲವಾರು ಕಾಯಿಲೆಗಳು ಅಪಾಯಕಾರಿಯಾಗಿವೆ. ಅಂತಹ ಕಾಯಿಲೆಗಳಲ್ಲಿ ಕ್ಷಯರೋಗ (ಟಿಬಿ) ಕೂಡ ಒಂದು. ಕ್ಷಯರೋಗವು ಮೈಕೋಬ್ಯಾಕ್ಟೀರಿಯಂ ಟ್ಯುಬರ್ ಕ್ಯುಲೋಸಿಸ್ ಎಂಬ ಬ್ಯಾಕ್ಟೀರಿಯಾದಿಂದ ಬರುತ್ತದೆ. ಮನುಕುಲಕ್ಕೆ ಈ ಕಾಯಿಲೆ ಹೊಸತೇನಲ್ಲ. ಪ್ರಾಚೀನ ಕಾಲದಿಂದಲೂ ಕ್ಷಯ (ಟಿಬಿ) ಒಂದಲ್ಲ ಒಂದು ರೀತಿಯಲ್ಲಿ ಮನುಷ್ಯನಿಗೆ ಕಾಡುತ್ತಲೇ ಬಂದಿದೆ. ಹೆಚ್ಚಾಗಿ ಶ್ವಾಸಕೋಶಕ್ಕೆ ಹಾನಿ ಮಾಡುವ ಇದನ್ನು ಪಲ್ಮನರಿ ಕ್ಷಯರೋಗ ಎಂದು ಕರೆಯಲಾಗುತ್ತದೆ. ದೇಹದ ಇತರ ಭಾಗಗಳಿಗೂ ಇದು ಹರಡುತ್ತದೆ. ಎಚ್‌ಐವಿ/ಏಡ್ಸ್ ಹೊರತುಪಡಿಸಿದರೆ ಜನರನ್ನು ಅತಿ ಹೆಚ್ಚು ಬಲಿ ತೆಗೆದುಕೊಳ್ಳುವ ಕಾಯಿಲೆ ಇದಾಗಿದೆ. ಈ ಬಗ್ಗೆ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಪ್ರಸಿದ್ಧ ಶ್ವಾಸಕೋಶ ತಜ್ಞ ಡಾ| ಪ್ರೀತಿರಾಜ್ ಬಳ್ಳಾಲ್ ‘ನ್ಯೂಸ್ ನಾಟೌಟ್’ ವಿಶೇಷ ಸಂದರ್ಶನದಲ್ಲಿ ಹಲವಾರು ಮಾಹಿತಿಗಳನ್ನು ನೀಡಿದ್ದಾರೆ. ಈ ಬಗೆಗಿನ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ವೀಕ್ಷಿಸಿ.
ಮೈಕೋಬ್ಯಾಕ್ಟೀರಿಯಂ ಟ್ಯೂಬರ್ ಕ್ಯುಲೋಸಿಸ್ ಸೂಕ್ಷ್ಮಾಣು ಜೀವಿ ಕ್ಷಯ ರೋಗವನ್ನು ಉಂಟು ಮಾಡುತ್ತದೆ. 1882 ಜರ್ಮನ್ ಮೈಕ್ರೋಬಯಾಲಜಿಸ್ಟ್ ರಾಬರ್ಟ್ ಕೋಚ್ ಬರ್ಲಿನ್ ಫಿಸಿಯೋಲಾಜಿಕಲ್ ಸೊಸೈಟಿ ಸಮ್ಮೇಳನದಲ್ಲಿ ಈ ಸೂಕ್ಷ್ಮ ಜೀವಿಯನ್ನು ಮೊದಲ ಬಾರಿಗೆ ಘೋಷಿಸಲಾಯಿತು. ರಾಬರ್ಟ್ ಕೋಚ್ ಕ್ಷಯರೋಗ ಕಂಡು ಹಿಡಿದ ವಿಜ್ಞಾನಿಯಾಗಿದ್ದಾರೆ. ಉಲ್ಲೇಖಿತ ಮಾಹಿತಿಗಳ ಪ್ರಕಾರ ಭಾರತದಲ್ಲಿ ಕ್ಷಯ ರೋಗದ ಇತಿಹಾಸ 3300 ವರ್ಷಕ್ಕಿಂತಲೂ ಹಳೆಯದು. 17ನೇ ಶತಮಾನದ ಆರಂಭದಲ್ಲಿ ಯುರೋಪ್ ನಲ್ಲಿ ಟಿ.ಬಿ ಸಾಂಕ್ರಾಮಿಕ ರೋಗವನ್ನು “ಗ್ರೇಟ್ ವೈಟ್ ಪ್ಲೇಗ್” ಎಂದು ಕರೆಯಲಾಗುತ್ತಿತ್ತು. ಕ್ಷಯ ರೋಗಕ್ಕೆ ಔಷಧಿ ಕಂಡು ಹುಡುಕುವ ಮೊದಲು ರೋಗಿಗಳನ್ನು ಜನಗಳಿಂದ ಪ್ರತ್ಯೇಕಿಸುವುದು ಹಾಗೂ ಸರಿಯಾದ ಚಿಕಿತ್ಸೆ ನೀಡುವುದು ಮುಖ್ಯವಾಗಿತ್ತು.
ಕ್ಷಯರೋಗಿಯು ಕೆಮ್ಮಿದಾಗ, ಉಗುಳಿದಾಗ, ಮಾತನಾಡುವಾಗ ಅಥವಾ ಸೀನಿದಾಗ ದ್ರವ ತುಂತುರು ಹನಿಯು(Droplet Nuclei) ಗಾಳಿಯ ಮೂಲಕ ಸೂಕ್ಷ್ಮ ಜೀವಿಗಳು ಇನ್ನೊಬ್ಬನ ದೇಹಕ್ಕೆ ಸೇರಿ ಆರೋಗ್ಯವಂತ ವ್ಯಕ್ತಿಗೆ ಸೋಂಕು ತಗಲುತ್ತದೆ. ಈ ರೋಗಿಗೆ ಚಿಕಿತ್ಸೆ ನೀಡದಿದ್ದರೆ ವಾರ್ಷಿಕವಾಗಿ 10-15 ವ್ಯಕ್ತಿಗಳಿಗೆ ಸೋಂಕನ್ನು ಹರಡುವ ಸಾಮರ್ಥ್ಯ ಹೊಂದಿರುತ್ತಾನೆ. ಸಾರ್ವಜನಿಕರ ಆರೋಗ್ಯದ ದೃಷ್ಟಿಕೋನದಿಂದ, ಸಮುದಾಯದಲ್ಲಿ ರೋಗದ ಹರಡುವಿಕೆಯ ಸರಪಳಿಯನ್ನು ಕಡಿತಗೊಳಿಸಲು TB ಯನ್ನು ಸಾಧ್ಯವಾದಷ್ಟು ಬೇಗ ಪತ್ತೆ ಹಚ್ಚುವುದು ಹಾಗೂ ಚಿಕಿತ್ಸೆ ನೀಡುವುದು ಅವಶ್ಯಕವಾಗಿದೆ.
ಮಧುಮೇಹ,HIV ಸೋಂಕು,ಆಲ್ಕೊಹಾಲ್,ತಂಬಾಕು ಸೇವನೆ,ಅಪೌಷ್ಟಿಕತೆ ಇರುವವರಲ್ಲಿ ಈ ರೋಗ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ.
2 ವಾರ ಅಥವಾ ಅದಕ್ಕಿಂತ ಹೆಚ್ಚು ಕಾಲ ಇರುವ ಕೆಮ್ಮು. ಜ್ವರ, ಗಮನಾರ್ಹ ತೂಕ ನಷ್ಟ ಹಾಗೂ ಕಫದಲ್ಲಿ ರಕ್ತ ಇಂತಹ ಲಕ್ಷಣ ಕಂಡುಬಂದಲ್ಲಿ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರೊಂದಿಗೆ ಸಮಾಲೋಚಿಸುವುದು ಉತ್ತಮ.
ಕಫ ಪರೀಕ್ಷೆ (Smear, CBNAT Culture) ಉಚಿತವಾಗಿ NTEP ಅಡಿಯಲ್ಲಿ ಎಲ್ಲಾ ಅರೋಗ್ಯ ಕೇಂದ್ರ (Govt/Private) ಗಳಲ್ಲಿ ಲಭ್ಯವಿದೆ.
NTEP (National TB Elimination Program) ಅಡಿಯಲ್ಲಿ ಡ್ರಗ್ ಸೆನ್ಸಿಟಿವ್ ಹಾಗೂ ಡ್ರಗ್ ರೆಸಿಸ್ಟೆಂಟ್ ಚಿಕಿತ್ಸೆ ಉಚಿತವಾಗಿ ಲಭ್ಯವಿದೆ. ಹೊಸ ಮೆಡಿಸಿನ್ ಗಳ ಆವಿಷ್ಕಾರದಿಂದ ಡ್ರಗ್ ರೆಸಿಸ್ಟೆಂಟ್ (MDR/RR-TB) ಚಿಕಿತ್ಸೆ ಅವಧಿ ಗಮನಾರ್ಹ ಇಳಿಕೆಯಾಗಿದೆ.
ಮಾರ್ಚ್ 24 1882 TB ಗೆ ಕಾರಣವಾಗುವ ಬ್ಯಾಕ್ಟೀರಿಯಾವನ್ನು ಕಂಡು ಹುಡುಕಿದ ದಿನವಾದ್ದರಿಂದ ಪ್ರತಿವರ್ಷ ಮಾರ್ಚ್ 24 ರಂದು ವಿಶ್ವ ಕ್ಷಯ ರೋಗ ದಿನವೆಂದು ಆಚರಿಸಲಾಗುತ್ತದೆ. ನಾವು ಕ್ಷಯರೋಗವನ್ನು ಕೊನೆಗಾಣಿಸಬಲ್ಲೆವು ಎಂಬ ಥೀಮ್ ನೊಂದಿಗೆ ಈ ವರ್ಷದ ವಿಶ್ವ ಕ್ಷಯರೋಗ ದಿನವನ್ನು ಆಚರಿಸಲಾಗಿತ್ತು. ಭಾರತದಲ್ಲಿ ಅತೀ ಹೆಚ್ಚು TB ಪ್ರಕರಣಗಳು ಕಂಡುಬರುತ್ತದೆ. 2022 ರಲ್ಲಿ 24.2 ಲಕ್ಷ ಹೊಸ ಕ್ಷಯರೋಗ ಪ್ರಕರಣ ದಾಖಲಾಗಿದೆ. ಇದು 2021 ಕ್ಕೆ ಹೋಲಿಸಿದರೆ 13% ಹೆಚ್ಚು. ಹಾಗಾಗಿ ಕ್ಷಯ ರೋಗವನ್ನು ಆರಂಭಿಕವಾಗಿ ಪತ್ತೆ ಹಚ್ಚುವುದು ಹಾಗೂ ಚಿಕಿತ್ಸೆ ನೀಡುವುದರ ಮೂಲಕ ಸೋಂಕು ಹರಡುವುದನ್ನು ತಪ್ಪಿಸಬಹುದು.
ಎಲ್ಲಾ ಕ್ಷಯ ರೋಗಿಗಳಿಗೆ ಚಿಕಿತ್ಸೆಯ ಅವಧಿಗೆ ಪೌಷ್ಟಿಕಾಂಶದ ಅವಶ್ಯಕತೆಯನ್ನು ಪೂರೈಸಲು ಸರಕಾರದ ವತಿಯಿಂದ ಪ್ರತಿ ತಿಂಗಳು ರೂ 500 ನೀಡಲಾಗುತ್ತಿದೆ. ಕ್ಷಯ ಪೀಡಿತ ಬುಡಕಟ್ಟು ಗುಡ್ಡಗಾಡು ಪ್ರದೇಶದ ಜನಗಳಿಗೆ ರೂ 750 ಪ್ರಯಾಣಕ್ಕಾಗಿ ನೀಡಲಾಗುತ್ತದೆ.
ಕ್ಷಯರೋಗದ ಚಿಕಿತ್ಸೆಯನ್ನು ಬೆಂಬಲಿಸಲು ಹಾಗೂ ಎಲ್ಲಾ ಸಮಾಜದ ಸಮುದಾಯದ ಮುಖ್ಯಸ್ಥರನ್ನು ರನ್ನು ಒಟ್ಟುಗೂಡಿಸಿ ಮತ್ತು ಕ್ಷಯ ರೋಗದ ನಿರ್ಮೂಲನೆಗೆ ದೇಶದ ಪ್ರಗತಿಯನ್ನು ವೇಗಗೊಳಿಸಿ, 2025ರ ವೇಳೆಗೆ ಕ್ಷಯ ರೋಗವನ್ನು ಕೊನೆಗೊಳಿಸಲು ಎಲ್ಲರೂ ಒಗ್ಗೂಡಬೇಕು ಎನ್ನುವ ಗುರಿ ಹೊಂದಿದೆ. ಇದಕ್ಕಾಗಿ ಜನ್ ಭಾಗೀದಾರಿ ಅಂದರೆ ಜನರ ಭಾಗವಹಿಸುವಿಕೆ,ಸಾಮಾಜಿಕ ಮಾಧ್ಯಮ ವರ್ಧನೆ (media engagement )ಪ್ರಸಿದ್ಧ ವ್ಯಕ್ತಿಗಳಿಂದ ಅರಿವು ಮೂಡಿಸುವಂತಹ ಕಾರ್ಯಕ್ರಮಗಳ (celebrity endorsement )ಅವಶ್ಯಕತೆ ಇದೆ.
ಕ್ಷಯರೋಗ ಸೋಂಕು ಹರಡುವುದನ್ನು ನಿಯಂತ್ರಿಸಲು ರೋಗಿಯು ಕೆಮ್ಮುವಾಗ ಮುಖಕ್ಕೆ ಕರವಸ್ತ್ರ ಅಥವಾ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಕ್ಷಯರೋಗವನ್ನು ಆರಂಭಿಕ ಹಂತದಲ್ಲಿ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆಯನ್ನು ಸಂಪೂರ್ಣ ಅವಧಿಗೆ ತೆಗೆದುಕೊಂಡರೆ ಟಿಬಿ ಕಾಯಿಲೆ ಸಂಪೂರ್ಣವಾಗಿ ಗುಣ ಪಡಿಸಲು ಸಾಧ್ಯವಿದೆ. ರೋಗಿಯ ಸಂಪರ್ಕಿತ ವ್ಯಕ್ತಿಗಳನ್ನು ಸೂಕ್ತ ಪರೀಕ್ಷೆಗಳಿಗೆ ಒಳಪಡಿಸಿದ ನಂತರ, ಅವರಲ್ಲಿಯೂ ರೋಗ ನಿಯಂತ್ರಣಕ್ಕಾಗಿ ಚಿಕಿತ್ಸೆಯನ್ನು ನೀಡಬೇಕಾಗಿದೆ. ಕ್ಷಯ ರೋಗಿಯಲ್ಲಿ ಯಾವುದೇ ಪ್ರತ್ಯೇಕಿಸಿದ ಭಾವನೆಯನ್ನು ಉಂಟುಮಾಡದೆ, ಸೂಕ್ತ ಕ್ರಮಗಳನ್ನು ಕೈಗೊಂಡು “ಕ್ಷಯರೋಗ ಮುಕ್ತ ಭಾರತ” ವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯನ್ನಿಡಬೇಕಿದೆ.