ನ್ಯೂಸ್ ನಾಟೌಟ್: ಕರ್ನಾಟಕ ಸರ್ಕಾರ ಸಾರಿಗೆ ನೌಕರರ ಮುಷ್ಕರ ತಡೆಯಲು ಕ್ರಮಗಳನ್ನು ಕೈಗೊಳ್ಳುತ್ತಿದೆ. ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳ ನಿವೃತ್ತ ಸಿಬ್ಬಂದಿಗೆ ನೀಡಬೇಕಾದ ಬಾಕಿ ಉಪಧನ ಮತ್ತು ಗಳಿಕೆ ರಜೆ ನಗದೀಕರಣ ಪಾವತಿಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಆದೇಶಿಸಿದ್ದಾರೆ. ಆದರೆ ಡಿಸೆಂಬರ್ 31ರಿಂದ ಕರೆ ನೀಡಿರುವ ಅನಿರ್ದಿಷ್ಟಾವಧಿ ಮುಷ್ಕರದ ಕುರಿತು ಇನ್ನೂ ಸಂಪೂರ್ಣ ಮಾಹಿತಿ ಹೊರಬಿದ್ದಿಲ್ಲ.
ಈಗಾಗಲೇ ಡಿಸೆಂಬರ್ 31ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಘೋಷಣೆ ಮಾಡಿದೆ. ಆದರೆ ಮುಷ್ಕರಕ್ಕೆ ಬೆಂಬಲ ನೀಡುವ ವಿಚಾರದಲ್ಲಿ, ಬಸ್ ಸೇವೆ ಇರಲಿದೆಯೇ?, ಇಲ್ಲವೇ ಎಂಬ ಬಗ್ಗೆ ಸಾರಿಗೆ ಒಕ್ಕೂಟದ ನೌಕರರ ಸಂಘಟನೆಗಳಲ್ಲಿಯೇ ಗೊಂದಲವಿದೆ ಎನ್ನಲಾಗಿದೆ.
ಅನಿರ್ದಿಷ್ಟಾವಧಿ ಮುಷ್ಕರದ ಕುರಿತು ಬೆಳಗಾವಿಯ ಚಳಿಗಾಲದ ಅಧಿವೇಶನದ ಸಮಯದಲ್ಲಿಯೇ ಸರ್ಕಾರಕ್ಕೆ ನೋಟಿಸ್ ನೀಡಲಾಗಿದೆ. ಆದರೆ ಸಾರಿಗೆ ನಿಮಗದ ಅಧಿಕಾರಿಗಳು ಮುಷ್ಕರ ತಡೆಯಲು ಎಸ್ಮಾ ಜಾರಿ ಕುರಿತು ಚಿಂತನೆ ನಡೆಸಿದ್ದಾರೆ. ಬಸ್ ಸೇವೆ ಎಂದಿನಂತೆ ಇರಲಿದೆ ಎಂದು ಜನರಿಗೆ ಭರವಸೆಯನ್ನು ಸಚಿವರು ನೀಡಿದ್ದಾರೆ, ಆದರೆ ಇದಕ್ಕೆ ನೌಕರರ ಸಂಘ ಸಮ್ಮತಿ ನೀಡಿಲ್ಲ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಕರೆ ನೀಡಿರುವ ಮುಷ್ಕರಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ 4 ನಿಗಮಗಳ ಸಂಘಟನೆಗಳ ಒಕ್ಕೂಟ ಬೆಂಬಲ ನೀಡದಿರಲು ತೀರ್ಮಾನಿಸಿದೆ. ಆದ್ದರಿಂದ ಮುಷ್ಕರದ ವಿಚಾರದಲ್ಲಿ ಸಂಘಟನೆಗಳಲ್ಲಿಯೇ ಒಮ್ಮತವಿಲ್ಲ ಎನ್ನಲಾಗಿದೆ.
ಕೆ.ಎಸ್.ಆರ್.ಟಿ.ಸಿ ನೌಕರರ ಕೂಟದ ರಾಜ್ಯಾಧ್ಯಕ್ಷ ಚಂದ್ರಶೇಖರ್ ಮಾತನಾಡಿ, “ನೌಕರರ ಬೇಡಿಕೆಯ ಕುರಿತು ಅಭಿಪ್ರಾಯ ಸಂಗ್ರಹಿಸಿಲ್ಲ. ಅಲ್ಲದೇ ಇನ್ನಿತರ ಕಾರಣಗಳಿಂದಾಗಿ ಈ ಮುಷ್ಕರಕ್ಕೆ ಒಕ್ಕೂಟ ಬೆಂಬಲ ನೀಡುವುದಿಲ್ಲ” ಎಂದು ಹೇಳಿದ್ದಾರೆ.
Click