ಮಂಗಳೂರು: ಪತ್ರಕರ್ತರು ಬಳಸುವ ಭಾಷೆ ಶುದ್ಧ, ಸರಳವಾಗಿದ್ದಾಗ ವರದಿಗಳು ಜನ ಸಮುದಾಯವನ್ನು ಸುಲಭವಾಗಿ ತಲುಪಲು ಸಾಧ್ಯ. ಇದಕ್ಕೆ ತಿಳಿದುಕೊಳ್ಳುವ ಆಸಕ್ತಿ ಜತೆ ಅಧ್ಯಯನ ಶೀಲತೆ ಅತೀ ಅಗತ್ಯ ಎಂದು ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.
ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆದ ಜಿಲ್ಲಾ ಪತ್ರಕರ್ತರ ಸಮ್ಮೇಳನ ‘ಸಾಧನೆ ಸಂಭ್ರಮ-2021’ ದ ಸರ್ವಾಧ್ಯಕ್ಷರಾಗಿ ಮಾತನಾಡಿದರು. ಭಾಷಾ ಶುದ್ದಿ, ಸರಳ ಭಾಷೆ ಬಗ್ಗೆ ಯುವ ಪತ್ರಕರ್ತರು ಗಮನ ಹರಿಸಬೇಕು ಎಂದು ಹೇಳಿದ ಅವರು ಸಂಘದ ನೇತೃತ್ವದಲ್ಲಿ ಭಾಷಾ ಶುದ್ಧಿಯ ಬಗ್ಗೆ ತರಬೇತಿ ಶಿಬಿರ ನೀಡುವ ಕಾರ್ಯವಾಗಲಿ ಎಂದು ಸಲಹೆ ನೀಡಿದರು.
ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಪತ್ರಿಕಾರಂಗದ ಗುರಿ ಕೇವಲ ಹೋರಾಟವಾಗಿದ್ದರೆ ಇಂದು ಅದು ಪತ್ರಿಕೋದ್ಯಮವಾಗಿ ಬೆಳೆದಿದೆ. ಉದ್ಯಮದ ಏಳುಬೀಳುಗಳನ್ನು ಪತ್ರಿಕೋದ್ಯಮ ಅಂತರ್ಗತಗೊಳಿಸಿದೆ. ಅದನ್ನು ಸರಿತೂಗಿಸಿಕೊಂಡು ಹೋಗಬೇಕಾದ ಅನಿವಾರ್ಯತೆ ಇಂದಿನ ಪತ್ರಕರ್ತರದ್ದಾಗಿದೆ ಎಂದು ಹೇಳಿದರು. ಪತ್ರಿಕಾ ರಂಗ ಉದ್ಯಮವಾಗಿ ಬೆಳೆದು ಬಂದ ರೀತಿ ನೋಡಿದಾಗ ಇಂದು ರಾಷ್ಟ್ರೀಯ ಮಾಧ್ಯಮದ ಪತ್ರಕರ್ತರು ಚಾರ್ಟರ್ಡ್ ವಿಮಾನದಲ್ಲಿ ಪ್ರಯಾಣ ಮಾಡಿ ಸುದ್ದಿ ಮಾಡುವ ಹಂತಕ್ಕೆ ಬೆಳೆದಿದೆ. ಉದ್ಯಮವಾದ ಕಾರಣ ಪತ್ರಕರ್ತರು ಸವಾಲುಗಳನ್ನು ಎದುರಿಸುವ ಜತೆಗೆ ಸ್ವತಹ ದೂರುದಾರರು, ತನಿಖಾಧಿಕಾರಿಗಳು, ಪ್ರತಿವಾದಿಗಳು, ಸಾಕ್ಷಿದಾರರು ಮಾತ್ರವಲ್ಲದೆ ನ್ಯಾಯಾಧೀಶರೂ ಆಗಿದ್ದಾರೆ ಎಂದು ಮನೋಹರ್ ಪ್ರಸಾದ್ ಅವರು ಪ್ರಸಕ್ತ ಪತ್ರಿಕೋದ್ಯಮದ ಬಗ್ಗೆ ವಿಶ್ಲೇಷಿಸಿದರು.