ಸುಳ್ಯ: ಮಾರಣಾಂತಿಕ ಕಾಯಿಲೆಗೆ ತುತ್ತಾಗಿ ಮೃತಪಟ್ಟ ಐದು ವರ್ಷದ ಬಾಲಕಿ ಸಂಪಾಜೆಯ ಜೆಮಿಮಾ ಕೆ ಜಾನ್ ಅಂತ್ಯ ಸಂಸ್ಕಾರ ಶುಕ್ರವಾರ ಕಲ್ಲುಗುಂಡಿಯಲ್ಲಿ ನಡೆಯಿತು. ಜನಪರ ಹೋರಾಟಗಾರ ಕಾಂಟ್ರಾಕ್ಟರ್ ಕೆ.ಪಿ.ಜಾನಿಯವರ ಮಗಳು ಜೆಮಿಮಾ ಅಪರೂಪದ ಮಾರಣಾಂತಿಕ ವೈರಸ್‌ಗೆ ತುತ್ತಾಗಿದ್ದಳು. ಎಪ್ಸ್ಟೀನ್ ಬಾರ್ ವೈರಸ್ (ಇಬಿವಿ) ಸೋಂಕು, ಹಿಮೋಫಾಗೊಸಿಟಿಕ್ ಲಿಂಫೋಹಿಸ್ಟಿಯೋಸೈಟೋಸಿಸ್ (ಎಚ್ಎಲ್ಎಚ್) ಸಿಂಡ್ರೋಮ್ ಮತ್ತು ತುರ್ತು ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್ ನಿಂದ ಬಳಲುತ್ತಿದ್ದಳು. ಕಳೆದ ಕೆಲವು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿದ್ದ ಜೆಮಿಮಾ ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಗುರುವಾರ ನಿಧನಳಾಗಿದ್ದಳು. ಮೃತದೇಹವನ್ನು ಸಂಪಾಜೆಯ ಕಲ್ಲುಗುಂಡಿಯಲ್ಲಿರುವ ಜಾನಿ ಯವರ ಮನೆಗೆ ತರಲಾಗಿತ್ತು. ಬಳಿಕ ಕಲ್ಲುಗುಂಡಿಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಕ್ರಿಶ್ಚಿಯನ್ ವಿಧಿ ವಿಧಾನದ ಪ್ರಕಾರ ಅಂತಿಮ ಸಂಸ್ಕಾರಕ್ಕೆ ಅಗತ್ಯವಿದ್ದ ಕಾರ್ಯಗಳನ್ನು ಮಾಡಲಾಯಿತು. ತಂದೆ-ತಾಯಿ, ಸಹೋದರಿಯರು, ಕುಟುಂಬ ಸದಸ್ಯರು, ಊರವರು, ಸ್ನೇಹಿತರು ಜೆಮಿಮಾಗೆ ಭಾರವಾದ ಮನಸ್ಸಿನಿಂದ ಕಣ್ಣೀರ ವಿದಾಯ ಹೇಳಿದ ಸನ್ನಿವೇಶ ಕರುಳು ಹಿಂಡಿ ಬರುವಂತಿತ್ತು.