ನ್ಯೂಸ್ ನಾಟೌಟ್: ಬೆಂಗಳೂರಿನಲ್ಲಿ ಕೆಲವು ತಿಂಗಳ ಹಿಂದೆ ವ್ಯಕ್ತಿಯೊಬ್ಬರು ಫ್ಲೈ ಓವರ್ ಮೇಲಿಂದ ಕರೆನ್ಸಿ ನೋಟುಗಳನ್ನು ಎಸೆದ ಘಟನೆ ನಡೆದಿತ್ತು. ಆದರೆ, ಬಿಹಾರದ ರೊಹ್ಟಾಸ್ ಜಿಲ್ಲೆಯ ಸಾಸಾರಂ ಪಟ್ಟಣದಲ್ಲಿ ನೂರು ಮತ್ತು ಹತ್ತರ ನೋಟುಗಳ ಕಂತೆಗಳು ತೇಲಿ ಬಂದ ಘಟನೆ ನಡೆದಿದೆ.
ಮೊರಾದಾಬಾದ್ ಗ್ರಾಮದ ವಸತಿ ಸ್ಥಳವೊಂದರ ಸಮೀಪದ ಚರಂಡಿಯೊಂದರಲ್ಲಿ ಶನಿವಾರ ದುಡ್ಡಿನ ಕಂತೆಗಳು ಇರುವುದನ್ನು ಕಂಡ ಜನರು, ದುರ್ನಾತ ಬೀರುವ ಕೊಳಚೆಯನ್ನೂ ಲೆಕ್ಕಿಸದೆ, ಮೀನು ಹಿಡಿಯಲು ಹೊರಟವರಂತೆ ಹಣದ ಕಂತೆಗಳನ್ನು ಬೊಗಸೆಯಲ್ಲಿ ತುಂಬಿಸಿಕೊಂಡಿದ್ದಾರೆ.
ಈ ವಿಚಿತ್ರ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. 2000 ರೂ, 500 ರೂ, 100 ರೂ ಮತ್ತು 10 ರೂಪಾಯಿ ಮುಖಬೆಲೆಯ ಕರೆನ್ಸಿ ನೋಟುಗಳು ಚರಂಡಿ ನೀರಿನಲ್ಲಿ ಕಾಣಿಸಿದ್ದು, ಅವುಗಳನ್ನು ಸಂಗ್ರಹಿಸಲು ಅನೇಕ ಜನರು ಮುಗಿಬಿದ್ದಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಚೀಲದಲ್ಲಿ ಲಕ್ಷಾಂತರ ರೂಪಾಯಿ ಹಣ ಇತ್ತು ಎನ್ನಲಾಗಿದೆ.
ಬೆಳಗ್ಗೆ 8 ಗಂಟೆಯ ವೇಳೆಗೆ ವ್ಯಕ್ತಿಯೊಬ್ಬರು ತ್ಯಾಜ್ಯಗಳಿಂದ ಗಲೀಜು ಆಗಿರುವ ಚರಂಡಿ ನೀರಿನಲ್ಲಿ ತೇಲಿಕೊಂಡು ಹೋಗುವುದನ್ನು ನೋಡಿದ್ದಾರೆ. 100,10 ರೂ. ನೋಟುಗಳ ಕಂತೆ ಕಂತೆಗಳೇ ತೇಲುವುದನ್ನು ನೋಡಿದ್ದಾರೆ.
ಚರಂಡಿಯ ಒಳಗೆ ಕರೆನ್ಸಿ ನೋಟುಗಳು ಇರುವ ಚೀಲಗಳು ಶನಿವಾರ ಬೆಳಿಗ್ಗೆ ಕಾಣಿಸಿದ್ದಾಗಿ ಗ್ರಾಮಸ್ಥರು ತಿಳಿಸಿದ್ದಾರೆ. ಇದನ್ನು ಕೆಲವರು ನೋಡಿದ್ದರು. ಕೂಡಲೇ ಊರಿನಲ್ಲಿ ಕಾಳ್ಗಿಚ್ಚಿನಂತೆ ಸುದ್ದಿ ಹರಡಿತು. ಚರಂಡಿಯ ದುರ್ವಾಸನೆಗಿಂತಲೂ ಹಣದ ‘ಘಮಲು’ ತೀವ್ರವಾಗಿದ್ದರಿಂದ ದೊಡ್ಡ ಸಂಖ್ಯೆಯಲ್ಲಿ ಜನರು ಚರಂಡಿಗೆ ಜಿಗಿದು ನೋಟುಗಳನ್ನು ಸಂಗ್ರಹಿಸಲು ಶುರುಮಾಡಿದ್ದರು. ಇದೆಲ್ಲವೂ ನೈಜ ನೋಟುಗಳಾಗಿದ್ದು, ಯಾವುದೂ ನಕಲಿ ಅಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.