ಮೈಸೂರು: ಮೈಸೂರು ಗ್ಯಾಂಗ್ ರೇಪ್ ಪ್ರಕರಣದ ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಮೂಲಕ ಪ್ರಕರಣ ನಡೆದ ನಾಲ್ಕು ದಿನಗಳ ಬಳಿಕ ಪ್ರಾಥಮಿಕ ಯಶಸ್ಸು ಸಿಕ್ಕಿದೆ. ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಿದ್ದ ಪೊಲೀಸರು ಅತ್ಯಾಚಾರ ಆರೋಪಿಗಳು ಅಪರಾಧ ಕೃತ್ಯ ನಡೆಸಿರುವ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡಿದ್ದಾರೆ. ಬಳಿಕ ನೆರೆ ರಾಜ್ಯಗಳಾದ ಕೇರಳ, ತಮಿಳುನಾಡಿಗೆ ತೆರಳಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎಲ್ಲರೂ ಇಂಜಿನಿಯರಿಂಗ್ ವಿದ್ಯಾರ್ಥಿಗಳೆಂಬ ಶಂಕೆ ವ್ಯಕ್ತವಾಗಿತ್ತು. ಆದರೀಗ ಯುವತಿ ಸ್ನೇಹಿತ ಕೊಟ್ಟ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣ ಬೇಧಿಸಲು ಸುಮಾರು 80ಕ್ಕೂ ಹೆಚ್ಚಿನ ಪೊಲೀಸರ ತಂಡ ಕಾರ್ಯಾಚರಣೆ ಆರಂಭಿಸಿತ್ತು. 25ಕ್ಕೂ ಹೆಚ್ಚು ಮಂದಿಯ ವಿಚಾರಣೆ ನಡೆಸಿತ್ತು. ಸದ್ಯ ಬಂಧಿತ ಆರೋಪಿಗಳನ್ನು ಅಜ್ಞಾತಸ್ಥಳದಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಇಂದು ಸಂಜೆ ವೇಳೆಗೆ ಸುದ್ದಿಗೋಷ್ಠಿ ನಡೆಸಿ ಪೊಲೀಸರು ಅಧಿಕೃತ ಮಾಹಿತಿ ನೀಡಲಿದ್ದಾರೆ.