ನ್ಯೂಸ್ ನಾಟೌಟ್: ದೂರದರ್ಶನದ ಖ್ಯಾತ ಸುದ್ದಿ ನಿರೂಪಕಿ ಗೀತಾಂಜಲಿ ಅಯ್ಯರ್ ಜೂನ್ 7, ಬುಧವಾರ ರಾತ್ರಿ ನಿಧನರಾಗಿದ್ದಾರೆ. 1971ರಲ್ಲಿ ದೂರದರ್ಶನ ಸೇರಿದ್ದ ಗೀತಾಂಜಲಿ ಅಯ್ಯರ್ ಅವರು 3 ದಶಕಗಳ ಕಾಲ ಆ್ಯಂಕರ್ ಆಗಿ ಕೆಲಸ ಮಾಡಿದ್ದು, ರಾಷ್ಟ್ರೀಯ ಸುದ್ದಿ ವಾಚನ ಮೂಲಕ ಅತ್ಯಂತ ಜನಪ್ರಿಯವಾಗಿದ್ದರು.
ಜೊತೆಗೆ ನಾಲ್ಕು ಬಾರಿ ಅತ್ಯುತ್ತಮ ನಿರೂಪಕಿ ಪ್ರಶಸ್ತಿ ಪಡೆದಿದ್ದಾರೆ. ದೂರದರ್ಶನದ ಮೊದಲ ಇಂಗ್ಲಿಷ್ ಸುದ್ದಿ ನಿರೂಪಕಿಯರಲ್ಲಿ ಒಬ್ಬರಾಗಿದ್ದ ಜನಪ್ರಿಯ ಆ್ಯಂಕರ್ ಗೀತಾಂಜಲಿ ಅಯ್ಯರ್(76) ಅವರು ಬುಧವಾರ ರಾತ್ರಿ ಹೊಸದಿಲ್ಲಿಯಲ್ಲಿ ನಿಧನರಾಗಿದ್ದಾರೆ. ಅವರು 30 ವರ್ಷಗಳಷ್ಟು ದೀರ್ಘ ಕಾಲ ದೂರದರ್ಶನದ ಸುದ್ದಿ ನಿರೂಪಕಿಯಾಗಿದ್ದರು.
ಕೋಲ್ಕತ್ತಾದ ಲೊರೆಟೊ ಕಾಲೇಜಿನಲ್ಲಿ ಪದವಿ ಪಡೆದ ಅಯ್ಯರ್ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಕಾಲೇಜಿನಿಂದ ಡಿಪ್ಲೊಮಾ ಪಡೆದಿದ್ದಾರೆ. 1989ರಲ್ಲಿ ಅತ್ಯುತ್ತಮ ಮಹಿಳೆಯರಿಗೆ ನೀಡುತ್ತಿದ್ದ ಇಂದಿರಾ ಗಾಂಧಿ ಪ್ರಿಯದರ್ಶಿನಿ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರು.
ಆಲ್ ಇಂಡಿಯಾ ರೇಡಿಯೊದಲ್ಲಿ ಪ್ರತಿ ಶುಕ್ರವಾರ ರಾತ್ರಿ ಪ್ರಸಾರವಾಗುತ್ತಿದ್ದ ಇಂಗ್ಲಿಷ್ ಹಾಡುಗಳ ಜನಪ್ರಿಯ ಎ ಡೇಟ್ ವಿತ್ ಯು ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು. ಮಾಧ್ಯಮ ಕ್ಷೇತ್ರದಲ್ಲಿನ ದಶಕಗಳ ಸುದೀರ್ಘ ವೃತ್ತಿಜೀವನದ ಬಳಿಕ ಕಾರ್ಪೊರೇಟ್ ಸಂವಹನ, ಸರ್ಕಾರಿ ಸಂಪರ್ಕ ಹಾಗೂ ಮಾರುಕಟ್ಟೆ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು.
ವರ್ಲ್ಡ್ ವೈಡ್ ಫಂಡ್ನ ಭಾರತದ ಪ್ರಮುಖ ದಾನಿಗಳ ಮುಖ್ಯಸ್ಥರಾಗಿದ್ದರು. ಗೀತಾಂಜಲಿ ಅಯ್ಯರ್ ಅವರ ನಿಧನಕ್ಕೆ ದೇಶದಾದ್ಯಂತ ಗಣ್ಯರು ಕಂಬನಿ ಮಿಡಿಯುತ್ತಿದ್ದಾರೆ.