ಬೆಂಗಳೂರು: ನಗರದಲ್ಲಿ ಕೋವಿಡ್ ಪ್ರಕರಣಗಳು ನಿಧಾನಗತಿಯಲ್ಲಿ ಹೆಚ್ಚಳ ಕಾಣುತ್ತಿರುವುದರಿಂದ ರಾತ್ರಿ ವೇಳೆ ಕೋವಿಡ್ ಕರ್ಫ್ಯೂವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಬಿಬಿಎಂಪಿ ಹಾಗೂ ಪೊಲೀಸ್ ಇಲಾಖೆ ಸಿದ್ಧತೆ ನಡೆಸಿವೆ. ನಗರದಲ್ಲಿ ಕೋವಿಡ್ ನಿಯಂತ್ರಣ ನಿಯಮಗಳ ಅನುಷ್ಠಾನ ಸಂಬಂಧ ಸೋಮವಾರ ನಡೆದ ಬಿಬಿಎಂಪಿ ಮತ್ತು ಪೊಲೀಸ್ ಇಲಾಖೆಯ ಸಮನ್ವಯ ಸಮಿತಿ ಸಭೆಯಲ್ಲೂ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ. ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ‘ನಗರದಲ್ಲಿ ಕೋವಿಡ್ ನಿಯಂತ್ರಿಸಲು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ರಾತ್ರಿ 10 ಗಂಟೆಯಿಂದ ಮುಂಜಾನೆ 5 ಗಂಟೆಯವರೆಗೆ ಕರ್ಫ್ಯೂ ಈಗಲೂ ಜಾರಿಯಲ್ಲಿದೆ. ಆದರೆ, ಅದು ಕಟ್ಟುನಿಟ್ಟಾಗಿ ಅನುಷ್ಠಾನ ಆಗುತ್ತಿಲ್ಲ. ಅದನ್ನು ಸಮರ್ಪಕವಾಗಿ ಜಾರಿಗೊಳಿಸಲು ಪೊಲೀಸ್ ಇಲಾಖೆಯ ಸಹಕಾರ ಅಗತ್ಯ’ ಎಂದು ಸಭೆಯಲ್ಲಿ ತಿಳಿಸಿದರು.