ನ್ಯೂಸ್ ನಾಟೌಟ್ : ಬಿಹಾರದಂತಹ ರಾಜ್ಯದಲ್ಲಿ ಇಂದಿಗೂ ಭೂತೋಚ್ಚಾಟನೆಯಿಂದ ಪ್ರಾಣ ಕಳೆದುಕೊಳ್ಳುತ್ತಿರುವವರಿದ್ದಾರೆ. ಇದೀಗ ನಳಂದ ಜಿಲ್ಲೆಯ ರಾಹುಯಿ ಬ್ಲಾಕ್‌ನ ಚಂದುವಾರಾ ಗ್ರಾಮದಲ್ಲಿ ಇಂತಹ ಘಟನೆ ಕಂಡುಬಂದಿದೆ.
ಮಗುವೊಂದಕ್ಕೆ ಚೇಳು ಕಚ್ಚಿದ್ದು, ಕುಟುಂಬಸ್ಥರು ಸಕಾಲಕ್ಕೆ ಚಿಕಿತ್ಸೆಗೆ ಆಸ್ಪತ್ರೆಗೆ ಕರೆದೊಯ್ಯದ ಕಾರಣ ಭೂತ ವಿಸರ್ಜನೆ ಮೊರೆ ಹೋಗಿದ್ದಾರೆ. ಪರಿಣಾಮ ಐದು ವರ್ಷದ ಬಾಲಕ ಪ್ರಾಣ ಕಳೆದುಕೊಂಡಿದ್ದಾನೆ ಎಂದು ವರದಿಯಾಗಿದೆ.
ಚಂದೂರ ಗ್ರಾಮದ ಕರು ಮಿಸ್ತ್ರಿ ಎಂಬುವರ 5 ವರ್ಷದ ಪುತ್ರ ಸುಮಿತ್ ಕುಮಾರ್ ಕೊನೆಯುಸಿರೆಳೆದ ಬಾಲಕ. ಆಟವಾಡುತ್ತಿದ್ದ ವೇಳೆ ಮಗುವಿಗೆ ಚೇಳು ಕಚ್ಚಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಇದಾದ ನಂತರ ಮಗು ಚಡಪಡಿಸಲಾರಂಭಿಸಿದ್ದು, ನಂತರ ಗ್ರಾಮದ ಭೂತೋಚ್ಚಾಟಕರ ಬಳಿ ಕರೆದೊಯ್ದು ಭೂತ ವಿಸರ್ಜನೆ ಮಾಡಲಾಗಿದೆ. ರಾತ್ರಿ 3 ಗಂಟೆ ವೇಳೆಗೆ ಮಗು ಚೇತರಿಸಿಕೊಂಡಿದೆ ಎಂದು ಭೂತೋಚ್ಚಾಟಕರು ತಿಳಿಸಿದ್ದು, ಬಳಿಕ ಮಗುವನ್ನು ಮನೆಗೆ ಕರೆತರಲಾಗಿದೆ.
ಮನೆಗೆ ಬಂದ ನಂತರ ಮಗುವಿನ ಆರೋಗ್ಯ ಮತ್ತೆ ಹದಗೆಡಲು ಪ್ರಾರಂಭಿಸಿದ್ದು, ನಂತರ ಹತ್ತಿರದ ಮಾರುಕಟ್ಟೆಗೆ ಕರೆದೊಯ್ದು ಔಷಧ ನೀಡಲಾಗಿದೆ. ಬಳಿಕ ಬಾಲಕ ಮತ್ತೆ ಸ್ವಲ್ಪ ಸಮಯದವರೆಗೆ ಚೇತರಿಸಿಕೊಂಡಿದ್ದ, ಬೆಳಗ್ಗೆ ಮತ್ತೆ ಜ್ವರ ಕಾಣಿಸಿಕೊಂಡ ನಂತರ ಚಿಕಿತ್ಸೆ ನೀಡಲು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬಾಲಕನನ್ನು ಬಿಹಾರ್‌ಷರೀಫ್ ಸದರ್ ಆಸ್ಪತ್ರೆಗೆ ರವಾನಿಸಲಾಗಿದೆ. ಇಲ್ಲಿ ಮಗು ಕೊನೆಯುಸಿರೆಳೆದಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಇನ್ನು ಚೇಳು ಕಚ್ಚಿದ ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆತಂದಿದ್ದರೆ ಆತನ ಜೀವ ಉಳಿಸುವ ಸಾಧ್ಯತೆಗಳು ಹೆಚ್ಚಿರುತ್ತಿತ್ತು ಎಂದು ವೈದ್ಯರು ಹೇಳಿದ್ದಾರೆ. ಕೊನೆಗೆ ಮೂಢನಂಬಿಕೆ ಮಗುವನ್ನು ಬಲಿ ಪಡೆದಿದೆ.