ನ್ಯೂಸ್ ನಾಟೌಟ್ :ಚೆನ್ನಕೇಶವ ದೇವಾಲಯವು ತನ್ನ ಇತಿಹಾಸದಲ್ಲಿ ಹಲವು ಮಹತ್ವಪೂರ್ಣ ವಿಚಾರಗಳನ್ನು ಒಳಗೊಂಡಿದೆ. ಬ್ರಹ್ಮರಥವು ದೇವಾಲಯದ ಸುಳ್ಯ ಚನ್ನಕೇಶವ ಜಾತ್ರೆಯ ರಥೋತ್ಸವದಲ್ಲಿ ಬಳಸಲಾಗುತ್ತದೆ, ಮತ್ತು ಇದು ದೇವತಾ ಪೂಜೆಯ ಮತ್ತು ಆಧ್ಯಾತ್ಮಿಕ ಪದ್ಧತಿಗಳನ್ನು ಪ್ರತಿಬಿಂಬಿಸುತ್ತದೆ. 280ವರ್ಷಗಳ ನಂತರ ಹೊಸ ಬ್ರಹ್ಮರಥವನ್ನು ಸಮರ್ಪಿಸುವ ಮೂಲಕ, ದೇವಾಲಯವು ತನ್ನ ಇತಿಹಾಸ ಮತ್ತು ಪವಿತ್ರತೆಯನ್ನು ಮತ್ತಷ್ಟು ಹೆಚ್ಚಿಸಕೊಳ್ಳಲಿದೆ. ಇದು ಶ್ರದ್ಧಾಭಾವ ಮತ್ತು ಭಕ್ತಿಯ ಸಂಕೇತವಾಗಿದೆ. ಡಾ. ಕೆ.ವಿ.ಚಿದಾನಂದ ಅವರ ಕುಟುಂಬವು ಈ ಬ್ರಹ್ಮರಥವನ್ನ ಸಮರ್ಪಿಸುವುದು ಚನ್ನಕೇಶವ ದೇವರ ಅನುಗ್ರಹವೇ ಸರಿ ಇದು ಸಮುದಾಯದ ಪರಂಪರೆಯನ್ನು ಉಳಿಸುವ ಮತ್ತು ಸಂಸ್ಕೃತಿಯನ್ನು ಪ್ರತಿಷ್ಠಾಪಿಸುವ ಕೆಲಸವನ್ನು ಮುಂದುವರಿಸುವ ಉದ್ದೇಶವನ್ನು ಹೊಂದಿದೆ.
ನೂತನ ಬ್ರಹ್ಮ ರಥದ ಕೆತ್ತನೆ ಕೆಲಸವನ್ನು ಪ್ರಸಿದ್ಧ ರಥಶಿಲ್ಪಿ, ಶಿಲ್ಪಗುರು ಶ್ರೀ ಕೋಟೇಶ್ವರ ಲಕ್ಷ್ಮೀನಾರಾಯಣ ಆಚಾರ್ಯ ಇವರ ಮಾರ್ಗದರ್ಶನದಲ್ಲಿ ಹಾಗೂ ಶ್ರೀ ರಾಜಗೋಪಾಲ ಆಚಾರ್ಯ ಇವರ ನೇತೃತ್ವದಲ್ಲಿ ರಚಿಸಿದೆ. ನೂತನ ಬ್ರಹ್ಮ್ಮರಥವು ಮುಂದಿನ 300 ರಿಂದ 400 ವರ್ಷಗಳ ಕಾಲ ಉಪಯೋಗಿಸಬಹುದು ಎಂದು ಬ್ರಹ್ಮರಥ ನಿರ್ಮಿಸಿದ ಶಿಲ್ಪಿಗಳು ಅಭಿಪ್ರಾಯಪಡುತ್ತಾರೆ.
ಈ ಹೊಸ ಬ್ರಹ್ಮರಥವು ಶಿಲ್ಪಕಲೆಯ, ವೈಶಿಷ್ಟ್ಯಪೂರ್ಣ ವಿನ್ಯಾಸ ಮತ್ತು ಆರೈಕೆಯ ದೃಷ್ಟಿಯಿಂದ ಅತ್ಯಂತ ಗಮನಾರ್ಹವಾಗಿದೆ. ಇದು ದೇವಾಲಯದ ಭಕ್ತರಿಗೆ ಆಧ್ಯಾತ್ಮಿಕವಾಗಿ ಪ್ರೇರಣೆಯಾದರೂ, ಇದೇ ಸಮಯದಲ್ಲಿ ಸಾಮಾಜಿಕವಾಗಿ ಮಹತ್ವಪೂರ್ಣವಾದ ಸಂಪ್ರದಾಯವನ್ನು ಸಾರುವಂತಿದೆ. ಡಾ. ಕೆ.ವಿ.ಚಿದಾನಂದ ಅವರ ಕುಟುಂಬದವರು ಹೊಸ ಬ್ರಹ್ಮರಥವನ್ನು ಸಮರ್ಪಿಸಿ, ದೇವಾಲಯದ ಇತಿಹಾಸಕ್ಕೆ ಹೊಸ ಅಧ್ಯಾಯವನ್ನು ರಚಿಸಲಿದ್ದಾರೆ.
ಶ್ರೀ ಚೆನ್ನಕೇಶವ ದೇವಸ್ಥಾನವು ಸುಳ್ಯದ ಕೇಂದ್ರ ಸ್ಥಾನದಲ್ಲಿದ್ದು ಬಹುಕಾಲದಿಂದಲೂ ಸಾವಿರಾರು ಭಕ್ತಾದಿಗಳ ಅಶೋತ್ತರಗಳನ್ನು ಈಡೇರಿಸಿದೆ. ದೇವಸ್ಥಾನವು ಜೀರ್ಣಾವಸ್ಥೆಯಲ್ಲಿರುವ ಸಮಯದಲ್ಲಿ ಸುಳ್ಯದ ಅಮರಶಿಲ್ಪಿ, ಶಿಕ್ಷಣ ಬ್ರಹ್ಮ, ಕೊಡುಗೈ ದಾನಿ ದಿ. ಡಾ| ಕುರುಂಜಿ ವೆಂಕಟ್ರಮಣ ಗೌಡರ ಅಧ್ಯಕ್ಷತೆಯಲ್ಲಿ ಜೀರ್ಣೋದ್ಧಾರ ಸಮಿತಿಯನ್ನು ರಚಿಸಿ 2002ನೇ ಇಸವಿಯಲ್ಲಿ ಸುಮಾರು ರೂ.3 ಕೋಟಿ ವೆಚ್ಚದಲ್ಲಿ ದೇವಸ್ಥಾನದ ಗರ್ಭಗುಡಿ, ಗೋಪುರ ಹಾಗೂ ಇನ್ನಿತರ ಕಾಮಗಾರಿ ನಡೆಸಿ ಅದ್ದೂರಿಯಾಗಿ ಬ್ರಹ್ಮಕಲಶೋತ್ಸವ ನೆರವೇರಿಸಿ ಸುಳ್ಯ ಭಾಗದಲ್ಲಿ ಒಂದು ಮಾದರಿ ದೇವಸ್ಥಾನವನ್ನಾಗಿ ಪರಿವರ್ತಿಸಿದರು. ಇದು ಭಕ್ತಾದಿಗಳ ಪಾಲಿಗೆ ವರದಾನವಾಗಿ ಪರಿಣಮಿಸಿದೆ. ತದನಂತರ ದೇವಳದ ಧಾರ್ಮಿಕ ಕಾರ್ಯಕ್ರಮಗಳು ಅತ್ಯಂತ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆ. ಪ್ರತೀ ವರ್ಷ ಜನವರಿಯಲ್ಲಿ ಶ್ರೀ ಚೆನ್ನಕೇಶವ ದೇವರ ರಥೋತ್ಸವವು ವಿಜೃಂಭಣೆಯಿಂದ ನಡೆಯುತ್ತಿದ್ದು ಇತ್ತೀಚೆಗೆ ಅಸಂಖ್ಯ ಭಕ್ತರನ್ನು ಹೊಂದಿದೆ. ಸುಳ್ಯ ಶ್ರೀ ಚೆನ್ನಕೇಶವ ದೇವರ ಈಗ ಇರುವ ರಥವನ್ನು ಸುಮಾರು 280 ವರ್ಷಗಳ ಹಿಂದೆ ಪ್ರಸಿದ್ಧ ನಾವೂರು ಕುಟುಂಬದ ದಿ. ನಾರ್ಣಪ್ಪಯ್ಯ ಇವರು ನೀಡಿರುತ್ತಾರೆ.
ಇಂದಿನ ಕಾಲಕ್ಕನುಗುಣವಾಗಿ ಸುಳ್ಯದ ಶ್ರೀ ಚೆನ್ನಕೇಶವ ರಥೋತ್ಸವವನ್ನು ಇನ್ನಷ್ಟು ವಿಜೃಂಭಣೆಯಿಂದ ನಡೆಸುವ ಉದ್ದೇಶದಿಂದ ಪ್ರಸ್ತುತ ಶ್ರೀ ಚೆನ್ನಕೇಶವ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾಗಿರುವ ಡಾ. ಕೆ. ವಿ. ಚಿದಾನಂದ ಮತ್ತು ಕುಟುಂಬದವರು ನೂತನ ಬ್ರಹ್ಮರಥ ಮತ್ತು ನೂತನ ಪಲ್ಲಕ್ಕಿಯನ್ನು ಸಮರ್ಪಣೆ ಮಾಡು ತ್ತಿರುವುದು. ಜ್ಯೋತಿಷ್ಯ ಪ್ರಶ್ನಾ ಚಿಂತನೆ ನಡೆಸಿ ಕ್ಷೇತ್ರದ ತಂತ್ರಿವರ್ಯರೊಂದಿಗೆ ಸಮಾಲೋಚನೆ ನಡೆಸಿದಾಗ ಸರ್ವ ರೀತಿಯಲ್ಲಿಯೂ ಶುಭಯೋಗ ಫಲಗಳು ಕೂಡಿ ಬಂದಿರುತ್ತದೆ. ಬ್ರಹ್ಮರಥವನ್ನು ಸಮರ್ಪಿಸುವುದು ಸಹ ಒಂದು ಸುಯೋಗ ಯಾರು ಬ್ರಹ್ಮರಥವನ್ನು ಮಾಡಿಸಿಕೊಡಬಹುದು ಎನ್ನುವುದು ಸಹ ದೈವ ಸಂಕಲ್ಪ ಅಂಥಹ ಯೋಗ ಡಾ. ಕೆ. ವಿ. ಚಿದಾನಂದ ರವರ ಕುಟುಂಬಕ್ಕೆ ಒದಗಿ ಬಂದಿರುವುದು ದೈವ ಸಂಕಲ್ಪವೇ ಸರಿ.