ಮಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಬಳಿಕ ಹಲವು ಬದಲಾವಣೆಗಳಿಗೆ ನಾಂದಿ ಹಾಡಿದ್ದು, ಜನತೆಯಿಂದಲೂ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ. ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾರ, ಹೂಗುಚ್ಛ ಬದಲು ಪುಸ್ತಕ ನೀಡುವ ಆದೇಶ ನೀಡಿದ ಬೊಮ್ಮಾಯಿ ಇದೀಗ ಸಾರ್ವಜನಿಕ ಸ್ಥಳಗಳಲ್ಲಿ ಗೌರವ ವಂದನೆ ಬೇಡವೆಂದಿದ್ದಾರೆ. ಬೆಂಗಳೂರಿನಿಂದ ಗುರುವಾರ ಬೆಳಗ್ಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರವೇಶಿಸುತ್ತಿದ್ದಂತೆ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಯಿಂದ ಮುಖ್ಯಮಂತ್ರಿಗಳಿಗೆ ಆತ್ಮೀಯ ಸ್ವಾಗತ ಕೋರಲಾಯಿತು. ಆರತಿ ಬೆಳಗುವ ಮೂಲಕ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತೆಯರು ಬರಮಾಡಿಕೊಂಡರು. ಇದೇ ವೇಳೆ ವಿಮಾನ ನಿಲ್ದಾಣದಲ್ಲಿ ಪೊಲೀಸ್ ಇಲಾಖೆಯಿಂದ ಗಾರ್ಡ್ ಆಫ್ ಆನರ್ ವ್ಯವಸ್ಥೆಯಾಗಿತ್ತು. ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ಇನ್ನು ಮುಂದೆ ಗಾರ್ಡ್ ಆಫ್ ಆನರ್ ವ್ಯವಸ್ಥೆ ನಿಲ್ಲಿಸಲು ನಿರ್ಧರಿಸಿದ್ದೇನೆ.ವಿಮಾನ ನಿಲ್ದಾಣದಲ್ಲಿ ಸಕಲ ಸಿದ್ಧತೆ ಮಾಡಿದ್ದರಿಂದ ಈ ಬಾರಿ ಗೌರವ ಸ್ವೀಕರಿಸಿದ್ದೇನೆ. ಮುಂದೆ ಇಂತಹ ವ್ಯವಸ್ಥೆಗಳು ಬೇಡವೆಂದು ನಿರ್ಧರಿಸಿರುವುದಾಗಿ ತಿಳಿಸಿದರು. ವಿಮಾನ ನಿಲ್ದಾಣ, ರೈಲ್ವೆ ಸ್ಟೇಷನ್ ಬಸ್ ನಿಲ್ದಾಣಗಳಲ್ಲಿ ಗಾರ್ಡ್ ಆಫ್ ಆನರ್ ನೀಡಿದರೆ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಇದನ್ನು ನಿಲ್ಲಿಸಲು ಕೂಡಲೇ ಸೂಚನೆ ಹೊರಡಿಸಲಾಗುವುದು ಎಂದು ತಿಳಿಸಿದರು.