ನ್ಯೂಸ್ ನಾಟೌಟ್: ಬೀಸೋ ದೊಣ್ಣೆಯಿಂದ ತಪ್ಪಿಸಿ ಕೊಂಡ್ರೆ ನೂರು ವರ್ಷ ಆಯುಷ್ಯವಂತೆ.ಈ ಮಾತು ಅಕ್ಷರಶಃ ನಿಜ.ಕೆಲವೊಂದು ಸಂದರ್ಭವನ್ನು ತುಂಬಾ ನಾಜೂಕಾಗಿ ಹ್ಯಾಂಡಲ್ ಮಾಡಬೇಕಾಗುತ್ತೆ. ಅದರಿಂದ ನಾವೂ ಬಚಾವಾಗಬೇಕು.ಇತರರಿಗೂ ನೋವಾಗಬಾರದು.ಇಂತಹ ಘಟನೆಗಳು ನಮ್ಮ ಸಮಾಜದಲ್ಲಿ ಆಗಾಗ್ಗೆ ನಡಿತಲೇ ಇರುತ್ತವೆ.ಅಂತೆಯೇ ಇದೀಗ ಕಡಬ ತಾಲೂಕಿನ ಬಳ್ಪ ಗ್ರಾಮದ ಮನೆಯೊಂದರಲ್ಲಿ ನಡೆದಿದೆ.
ಏನಿದು ಘಟನೆ?
![](https://newsnotout.com/wp-content/uploads/2025/02/WhatsApp-Image-2025-02-03-at-12.34.33-PM-805x1024.jpeg)
ಮಹಿಳೆಯೊಬ್ಬರು ಮನೆಯೊಳಗಿದ್ದ ವೇಳೆ ಯಾರೋ ಮನೆಗೆ ಅಪರಿಚಿತರು ಬಂದಿದ್ದು, ಕಳ್ಳರೆಂಬ ಶಂಕೆ ಹಿನ್ನೆಲೆಯಲ್ಲಿ ಮನೆಯಲ್ಲಿದ್ದ ಮಹಿಳೆ ಕೋವಿ ಹಿಡಿದುಕೊಂಡು ಬಂದಾಗ ಅಪರಿಚಿತರು ಪರಾರಿಯಾದ ಘಟನೆ ಬುಧವಾರ ನಡೆದಿದೆ.ಬಳ್ಪದ ಕುಂಜತ್ತಾಡಿ ಕೊಡಂಗುಳಿ ಸೋಮಪ್ಪ ಗೌಡ ಅವರ ಮನೆಯಲ್ಲಿ ಈ ಘಟನೆ ನಡೆದಿದೆ. ಬೆಳಗ್ಗೆ 11 ಗಂಟೆ ಸುಮಾರಿಗೆ ನಾಯಿ ಬೊಗಳಿದ ಶಬ್ದ ಕೇಳಿತು. ಹೀಗಾಗಿ ಸೋಮಪ್ಪ ಗೌಡರ ಅತ್ತಿಗೆ ಸಾವಿತ್ರಿ ಬಂದು ನೋಡಿದಾಗ ಕೊಟ್ಟಿಗೆ ಸಮೀಪ ಅಪರಿಚಿತ ವ್ಯಕ್ತಿಯೊಬ್ಬ ನಿಂತಿದ್ದ ಎಂದು ತಿಳಿದು ಬಂದಿದೆ.
ವಿಚಾರಿಸಿದಾಗ ಅವರ ಕಡೆಯಿಂದ ಯಾವುದೇ ಉತ್ತರ ಬರಲಿಲ್ಲ. ಕೂಡಲೇ ಮಹಿಳೆ ಮನೆಯಿಂದ ಕೋವಿ ಹಿಡಿದುಕೊಂಡು ಹೊರಗೆ ಬಂದರು.ಈ ವೇಳೆ ಹೊರಗೆ ಇಬ್ಬರು ಕಂಡುಬಂದರು ಎನ್ನಲಾಗಿದೆ.ಅವರು ಮಹಿಳೆಯ ಕೈಯಲ್ಲಿ ಕೋವಿ ಇರುವುದನ್ನು ಗಮನಿಸಿ ಅಲ್ಲಿಂದ ಕಾಲ್ಕಿತ್ತರು. ಬಳಿಕ ಮಹಿಳೆ ಸ್ಥಳೀಯರಿಗೆ ತಿಳಿಸಿದಾಗ ಎಲ್ಲರೂ ಸೇರಿ ಸುತ್ತಲೂ ಹುಡುಕಾಡಿದರೂ ಅವರ ಸುಳಿವೇ ಸಿಗಲಿಲ್ಲ. ಘಟನೆ ಬಗ್ಗೆ ಸುಬ್ರಹ್ಮಣ್ಯ ಪೊಲೀಸರಿಗೆ ತಿಳಿಸಲಾಗಿದ್ದು, ಅವರು ಸ್ಥಳಕ್ಕೆ ಬಂದು ಪರಿಶೀಲಿಸಿ ತನಿಖೆ ನಡೆಸುತ್ತಿದ್ದಾರೆ.