ನ್ಯೂಸ್ ನಾಟೌಟ್: ಇತ್ತೀಚೆಗಷ್ಟೇ ಕಿವಿ ಚುಚ್ಚಲೆಂದು ಆಸ್ಪತ್ರೆಗೆಂದು ಕರೆದುಕೊಂಡು ಹೋದಾಗ ವೈದ್ಯರು ಅನಸ್ತೇಶಿಯಾ ನೀಡಿ ಮಗು ದಾರುಣ ಮೃತಪಟ್ಟ ಘಟನೆ ಬಗ್ಗೆ ವರದಿಯಾಗಿತ್ತು.ಇದೀಗ ಅಂತಹುದೇ ಮತ್ತೊಂದು ಘಟನೆ ಬಗ್ಗೆ ವರದಿಯಾಗಿದೆ.ಆದರೆ ಇಲ್ಲಿ ನರ್ಸ್ ಒಬ್ಬಳು ಗಾಯಕ್ಕೆ ಹೊಲಿಗೆ ಹಾಕೋ ಬದಲು ಫೆವಿಕ್ವಿಕ್ ಹಾಕಿ ಕರ್ತವ್ಯ ಲೋಪ ಎಸಗಿರುವಂಥದ್ದು.ಇದೀಗ ಆಕೆಯನ್ನು ಅಮಾನತು ಪಡಿಸಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.
ಏನಾಗಿತ್ತು?
ಈ ಘಟನೆ ವರದಿಯಾಗಿದ್ದು ಹಾವೇರಿ ಜಿಲ್ಲೆ ಹಾನಗಲ್ ತಾಲೂಕು ಆಡೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ.ಇದೀಗ ಅಲ್ಲಿನ ಶುಶ್ರೂಷಕಿಯನ್ನು ಅಮಾನತುಪಡಿಸಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.ಕೆನ್ನೆ ಗಾಯಮಾಡಿಕೊಂಡು ಆಸ್ಪತ್ರೆಗೆ ಬಂದಿದ್ದ 7 ವರ್ಷದ ಬಾಲಕನಿಗೆ ಚಿಕಿತ್ಸೆ ನೀಡಿ ಹೊಲಿಗೆ ಹಾಕುವುದರ ಬದಲಾಗಿ ಫೆವಿಕ್ವಿಕ್ ಹಚ್ಚಿ ಕಳುಹಿಸಿದ್ದರು. ಈ ವಿಷಯ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಈ ಕುರಿತು ಆರೋಗ್ಯ ಇಲಾಖೆ ಇದನ್ನು ಗಂಭೀರವಾಗಿ ತೆಗೆದುಕೊಂಡು ಪ್ರಧಾನ ಕಾರ್ಯದರ್ಶಿಗಳು ಸಂಬಂಧಪಟ್ಟ ಅಧಿಕಾರಿಗಳ ಸಭೆ ನಡೆಸಿ ಅಗತ್ಯ ಮಾಹಿತಿ ಪಡೆದುಕೊಂಡರು. ಫೆವಿಕ್ವಿಕ್ ಒಂದು ಅಂಟು ದ್ರಾವಣವಾಗಿದ್ದು ವೈದ್ಯಕೀಯ ಬಳಕೆಗೆ ನಿಯಮದಲ್ಲಿ ಅವಕಾಶವಿರಲಿಲ್ಲ.
ಈ ಪ್ರಕರಣದಲ್ಲಿ ಚಿಕಿತ್ಸೆಗೆ ಫೆವಿಕ್ವಿಕ್ ಬಳಸಿ ಕರ್ತವ್ಯ ಲೋಪ ಎಸಗಿರುವುದು ಕಂಡು ಬಂದಿದೆ. ಹಾಗಾಗಿ ಪ್ರಾಥಮಿಕ ವರದಿ ಅನುಸಾರ ಸ್ಟಾಫ್ ನರ್ಸ್ ಅನ್ನು ಅಮಾನತುಗೊಳಿಸಿ ಕ್ರಮ ವಹಿಸಲಾಗಿದೆ. ಚಿಕಿತ್ಸೆಗೆ ಒಳಪಟ್ಟ ಮಗು ಆರೋಗ್ಯವಾಗಿದ್ದು ಯಾವುದೇ ಅಡ್ಡ ಪರಿಣಾಮವಾಗದಂತೆ ನಿಗಾ ವಹಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯ ತಿಳಿಸಿದೆ.