ನ್ಯೂಸ್ ನಾಟೌಟ್: ಕೊಡಗು ಹಾಗೂ ದಕ್ಷಿಣ ಕನ್ನಡ ಗಡಿ ಭಾಗಗಳಾದ ಸುಳ್ಯ ತಾಲೂಕಿನಲ್ಲಿ ಭೂಮಿಯೊಳಗಿನಿಂದ ಕೇಳಿ ಬರುತ್ತಿರುವ ಭಾರಿ ಶಬ್ಧ ಹಾಗೂ ಭೂಕಂಪ ಇನ್ನೂ ನಿಂತಂತಿಲ್ಲ, ಸರಣಿ ಭೂಕಂಪನಗಳ ಸಾಲು ಮತ್ತೆ ಮುಂದುವರಿದಿದ್ದು ಜನರು ತೀವ್ರ ಆತಂಕ್ಕೆ ಒಳಗಾಗಿದ್ದಾರೆ. ಈ ಕೂಡಲೇ ಸರಕಾರ ಇಲ್ಲಿಗೆ ಭೂ ಗರ್ಭ ವಿಜ್ಞಾನಿಗಳನ್ನು ಕರೆಯಿಸಿ ಪರಿಶೀಲನೆ ನಡೆಸಬೇಕು, ಮುಂದಾಗಬಹುದಾದ ಅನಾಹುತವನ್ನು ತಪ್ಪಿಸಬೇಕು ಎಂದು ಜನರು ಒತ್ತಾಯಿಸಿದ್ದಾರೆ. ಈ ನಡುವೆಯೇ ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರು ಕೊಡಗು (ಭೂ ತಜ್ಞ) ಅನನ್ಯ ವಾಸುದೇವ್ ನ್ಯೂಸ್ ನಾಟೌಟ್ ಗೆ ವಿಶೇಷ ಸಂದರ್ಶನ ನೀಡಿದ್ದಾರೆ. ಜನರಿಗೆ ಒಂದಷ್ಟು ಉಪಯುಕ್ತ ಮಾಹಿತಿಗಳನ್ನು ನೀಡಿದ್ದಾರೆ. ಈ ಕುರಿತ ಡಿಟೇಲ್ಸ್ ಇಲ್ಲಿದೆ ನೋಡಿ
ಭೂಕಂಪ ಅಥವಾ ಭೂಮಿಯೊಳಗಿನಿಂದ ಕೇಳಿ ಬರುವ ಶಬ್ಧದಿಂದ ಭಯಪಡಬೇಡಿ. ಪ್ರಕೃತಿಯ ಒಡಲಲ್ಲಿ ಬಹಳಷ್ಟು ಬದಲಾವಣೆ, ಮಾರ್ಪಾಡುಗಳಾಗುತ್ತಿರುತ್ತದೆ. ಇದರಿಂದ ಸಣ್ಣ ಪ್ರಮಾಣ ಕಂಪನದ ಅನುಭವ ಆಗುತ್ತದೆ. ಇದರ ತೀವ್ರತೆ ೨ ಅಥವಾ ೩ರ ತೀವ್ರತೆಯಲ್ಲಿ ಇರುತ್ತದೆ. ಇದರಿಂದ ಜನರ ಜೀವಕ್ಕೆ ಹಾನಿಯಾಗುವ ಸಾಧ್ಯತೆ ಇಲ್ಲ.
ಕಂಪನದ ಅನುಭವ ಆದ ಕೂಡಲೇ ಮನೆಯಿಂದ ಮೊದಲು ಹೊರಗೆ ಬರುವ ಪ್ರಯತ್ನ ಮಾಡಿ. ಅಥವಾ ಮಂಚದ ಕೆಳಗಡೆ ಅವಿತು ರಕ್ಷಣೆ ಪಡೆದುಕೊಳ್ಳಬಹುದು. ಭಯದಿಂದ ಪ್ಯಾನಿಕ್ ಆಗಬೇಡಿ.
ದಕ್ಷಿಣ ಕನ್ನಡ, ಕೊಡಗು ಹಾಗೂ ಮಲೆನಾಡು ಪ್ರದೇಶಗಳು ಭೂಕಂಪ ವಲಯ ಪ್ರದೇಶಗಳಾಗಿವೆ. ಪ್ರಾಕೃತಿಕವಾಗಿ ಭೂಮಿ ಸಮತೋಲನವಾಗುವ ಸಂದರ್ಭದಲ್ಲಿ ಇಂತಹ ಸಣ್ಣ ಪುಟ್ಟ ಕಂಪನಗಳು ಆಗುತ್ತಿರುತ್ತದೆ. ಮುಂದೆ ಇದು ಭಾರಿ ಅನಾಹುತ ಮಾಡುತ್ತದೆ ಅನ್ನುವುದನ್ನು ಈಗಲೇ ಹೇಳುವುದು ತಪ್ಪಾಗುತ್ತದೆ. ಎಚ್ಚರಿಕೆಯಿಂದ ಇರಬೇಕು ಹೊರತು ಅನಗತ್ಯ ಜನರಲ್ಲಿ ಭಯ ಪಡಿಸುವ ವಿಚಾರಗಳನ್ನು ಯಾರು ಮಾಡಬೇಡಿ.
ಚೆಂಬು ಗ್ರಾಮಕ್ಕೆ ತಜ್ಞರ ತಂಡ ಆಗಮಿಸುತ್ತದೆ. ಮಣ್ಣು ಸೇರಿದಂತೆ ಪರೀಕ್ಷೆಗೆ ಅಗತ್ಯವಾಗಿರುವ ಎಲ್ಲವನ್ನು ಸಂಗ್ರಹಿಸಲಾಗುತ್ತದೆ. ಅದನ್ನು ಭೂ ತಜ್ಞರು ಪರೀಕ್ಷಿಸಲಿದ್ದಾರೆ. ಇದೊಂದು ನಿರಂತರ ಪ್ರಕ್ರಿಯೆ ಆಗಿರುತ್ತದೆ. ಇದರ ಫಲಿತಾಂಶ ಬರುವುದಕ್ಕೆ ಕನಿಷ್ಟ ಎಂದರೂ ಐದಾರು ವರ್ಷಗಳು ಬೇಕಾಗಬಹುದು.