ನ್ಯೂಸ್ ನಾಟೌಟ್ : ಅಪ್ಪ ಮಾಡಿದ ತಪ್ಪಿಗೆ ನಾಲ್ವರು ಮಕ್ಕಳು ತಬ್ಬಲಿಯಾದ ಘಟನೆ ಕಲಬುರ್ಗಿ ಜಿಲ್ಲೆಯ ಚಿತ್ತಾಪುರ (Chittapur)ತಾಲೂಕಿನ ಅಲ್ಲೂರು ಬಿ ಗ್ರಾಮದಲ್ಲಿ ನಡೆದಿದೆ. ಹಾಡಹಗಲೇ ಕೇಳಿಸಿದ ಗುಂಡಿನ ಸದ್ದು ಓರ್ವ ಮಹಿಳೆಯ ಜೀವವನ್ನೇ ಕತ್ತಲನ್ನಾಗಿಸಿದೆ.
ಮೂವತ್ತಾರು ವರ್ಷದ ಹನಮವ್ವ ಗುಂಟೇಟಿಗೆ ಉಸಿರು ಚೆಲ್ಲಿದ್ದಾರೆ. ತಾಳಿ ಕಟ್ಟಿ ನಿನ್ನ ಉಸಿರುವವರೆಗೆ ನಿನ್ನ ಜೊತೆಯಾಗಿರುತ್ತೆನೆಂದ ಪತಿಯೇ ಈ ಕೃತ್ಯವೆಸಗಿದ್ದಾನೆ. ಹೌದು, ಹನಮವ್ವಳನ್ನು ಆಕೆಯ ಪತಿ ಬಸವರಾಜ್, ಸಿಂಗಲ್ ಬ್ಯಾರಲ್ ಗನ್ನಿಂದ ಎರಡು ಗುಂಡು ಹೊಡೆದು ಬಾರದ ಲೋಕಕ್ಕೆ ಕಳಿಸಿದ್ದಾನೆ.
ಹನ್ನೆರಡು ವರ್ಷದ ಹಿಂದೆ ಅಲ್ಲೂರು ಬಿ ಗ್ರಾಮದ ಹನಮವ್ವಳನ್ನು, ಪಕ್ಕದ ಅಲ್ಲೂರು ಕೆ ಗ್ರಾಮದ ಬಸವರಾಜ್ ಜೊತೆ ಮದುವೆ ಮಾಡಲಾಗಿತ್ತು. ಇತ ಬೇರ್ಯಾರು ಅಲ್ಲ, ಹನಮವ್ವಳ ಸೋದರ ಮಾವ. ಆದ್ರೆ, ಮದುವೆಯಾದ ಮೇಲೆ ಪ್ರತಿನಿತ್ಯ ಕುಡಿದು ಬಂದು ಪತ್ನಿಯನ್ನು ಹೊಡೆಯುವುದೇ ಬಸವರಾಜ್ನ ಕೆಲಸವಾಗಿತ್ತೆಂದು ಹೇಳಲಾಗಿದೆ.
ಕ್ರಮೇಣ ಹೆತ್ತವರು ಮಗಳನ್ನು ಅಲ್ಲೂರು ಬಿ ಗ್ರಾಮಕ್ಕೆ ಕರೆದುಕೊಂಡು ಬಂದಿದ್ದರು. ಗ್ರಾಮದಲ್ಲೇ ಪ್ರತ್ಯೇಕ ಮನೆಯನ್ನು ಕೂಡ ಮಾಡಿಕೊಟ್ಟಿದ್ದರು. ಪತ್ನಿ ಜೊತೆಯೇ ಇದ್ದ ಬಸವರಾಜ್, ಇಲ್ಲಿ ಕೂಡ ಪ್ರತಿನಿತ್ಯ ಕುಡಿದು ಬಂದು ಪತ್ನಿ ಜೊತೆ ಜಗಳ ಮಾಡಿ ಹಲ್ಲೆ ಮಾಡುವುದು ಮಾಡುತ್ತಿದ್ದನಂತೆ.ದಂಪತಿಗೆ ನಾಲ್ಕು ಮಕ್ಕಳು ಇದ್ದು ಅವು ಈಗ ತಬ್ಬಲಿಯಾಗಿವೆ.
ಹನಮವ್ವ ತಾನೇ ಸ್ವತಃ ಕೂಲಿ ಕೆಲಸ ಮಾಡಿ ಮಕ್ಕಳನ್ನು ಸಾಕುತ್ತಿದ್ದಳು. ನಿನ್ನೆ ಮನೆಗೆ ಕುಡಿದು ಬಂದಿದ್ದ ಬಸವರಾಜ್ಗೆ ಪ್ರತಿನಿತ್ಯ ಕುಡಿದು ಬರ್ತಿಯಾ, ಮಕ್ಕಳಿಗೆ ತುಂಡು ಬಟ್ಟೆಯನ್ನು ಕೂಡ ನೀನು ಕೊಡಿಸಿಲ್ಲ ಎಂದು ಹೇಳಿದ್ದಳಂತೆ. ಹೀಗಾಗಿ ಬಸವರಾಜ್, ಪತ್ನಿ ಜೊತೆ ಜಗಳ ಮಾಡಿದ್ದ. ಮುಂಜಾನೆ ಹೆತ್ತವರ ಮನೆಯಲ್ಲಿ ಹನಮವ್ವ ಇದ್ದಾಗ, ಅಲ್ಲಿಯೇ ಬಂದಿದ್ದ ಬಸವರಾಜ್ ಸ್ವಲ್ಪ ಹೊರಗೆ ಬಾ ಅಂತ ಕರೆದಿದ್ದ ಎಂದು ತಿಳಿದು ಬಂದಿದೆ.
ತಾನು ಬೇಟೆಯಾಡಲು ಹೋಗ್ತಿದ್ದೇನೆ, ನನಗೆ ಬುತ್ತಿಯನ್ನು ಕಟ್ಟು ಎಂದು ಹೇಳಿದ್ದ ಆತನಿಗೆ ಅಮವಾಸ್ಯೆಯಿದೆ, ಮನೆಯಲ್ಲೇ ಸುಮ್ಮನೇ ಇರು ಎಂದು ಪತ್ನಿ ಹೇಳಿದ್ದಳು. ಇದರಿಂದ ಸಿಟ್ಟಾದ ಪತಿ ಬಸವರಾಜ್, ಪತ್ನಿ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾನೆ.
ಸದ್ಯ ಹನಮವ್ವಳ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆ ಮಾಡಿದ ನಂತರ ಹನಮವ್ವಳ ಪತಿ ಬಸವರಾಜ್ ಪರಾರಿಯಾಗಿದ್ದು, ಆತನಿಗಾಗಿ ಹುಡುಕಾಟ ನಡೆದಿದೆ. ಮತ್ತೊಂದೆಡೆ ಸಿಂಗಲ್ ಬ್ಯಾರಲ್ ಗನ್ ಯಾರದ್ದು, ಆರೋಪಿ ಕೈಗೆ ಗನ್ ಸಿಕ್ಕಿದ್ದು ಹೇಗೆ ಅನ್ನೋದರ ಬಗ್ಗೆ ಕೂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದ್ರೆ, ಪಾಪಿ ಪತಿಯ ಕೃತ್ಯಕ್ಕೆ ನಾಲ್ಕು ಮಕ್ಕಳ ಜೀವನವೇ ಕತ್ತಲಾದಂತಿದೆ.ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ತಾಯಿ ಇಲ್ಲದೇ ಆ ಮಕ್ಕಳು ಹೇಗಿರುತ್ತಾರೋ ಎನ್ನುವ ಬೇಸರವನ್ನು ಊರವರು ವ್ಯಕ್ತಪಡಿಸುತ್ತಿದ್ದಾರೆ.