ನ್ಯೂಸ್ ನಾಟೌಟ್: ಮಳೆ, ಬಿರುಗಾಳಿ, ಬಿಸಿಲು ಪ್ರವಾಹ ಅದೆಂಥಹ ಕ್ಲಿಷ್ಟಕರ ಸಮಯವೇ ಇರಲಿ ಸಮಯದ ಪರಿವನ್ನೇ ನೋಡದೆ ದುಡಿಯುವ ಅದೆಷ್ಟೋ ಸಂಘ ಸಂಸ್ಥೆಗಳಿವೆ. ಅಂತಹ ಸಂಘ ಸಂಸ್ಥೆಗಳಲ್ಲಿ ಶ್ರೀ ಭಗವಾನ್ ಸಂಘ ಚೆಂಬು ಕೂಡ ಒಂದು.
ಕೊಡಗು ಜಿಲ್ಲೆಯಲ್ಲೇ ಗಮನ ಸೆಳೆದಂತಹ ಸಂಘ ಸಂಸ್ಥೆ. ಕೊಡಗಿನಲ್ಲಿ ಸಂಭವಿಸಿದ ಪ್ರಾಕೃತಿಕ ದುರಂತದ ಸಮಯದಲ್ಲಿ ಶ್ರೀ ಭಗವಾನ್ ಸಂಘ ಸದಸ್ಯರು ತಮ್ಮ ಜೀವವನ್ನು ಲೆಕ್ಕಿಸದೆ ಕೆಲಸ ಮಾಡಿದ್ದರು. ನೂರಾರು ಜನರ ಪ್ರಾಣವನ್ನ ಉಳಿಸಿದ್ದರು. ಅಷ್ಟೇ ಅಲ್ಲ ಅಶಕ್ತರಿಗೆ ಬಡವರಿಗೆ ಮನೆಯನ್ನು ಕಟ್ಟಿಕೊಟ್ಟು ಬಾಳಲ್ಲಿ ಬೆಳಕಾಗಿದ್ದಾರೆ. ಅಂತಹ ಸಂಸ್ಥೆ ಇದೀಗ ರಾಷ್ಟ್ರೀಯ ಹೆದ್ದಾರಿಯ ಸೂಚನಾ ಫಲಕಗಳನ್ನು ಸ್ವಚ್ಛಗೊಳಿಸಿ ವಾಹನ ಸವಾರರ ಪ್ರಯಾಣಕ್ಕೊಂದು ಅರ್ಥ ನೀಡಿದೆ.
ಭಗವಾನ್ ಸಂಘ ಚೆಂಬು- ಕೊಡಗು ನೆಹರೂ ಯುವ ಕೇಂದ್ರದ ಆಶ್ರಯದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭ ದಕ್ಷಿಣ ಕನ್ನಡ ಜಿಲ್ಲೆಯ ಸಂಪಾಜೆಯ ರಾಷ್ಟ್ರೀಯ ಹೆದ್ದಾರಿ 275 ರಲ್ಲಿರುವ ಕಲ್ಲುಗುಂಡಿ, ಕಡೆಪಾಲ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ದೇವರ ಕೊಲ್ಲಿಯ ಗಾರೆಮುರಿ ರಸ್ತೆವರೆಗೆ ಹೆದ್ದಾರಿ ಪ್ರಾಧಿಕಾರದ ಸೂಚನಾ ಫಲಕಗಳು, ಶಾಲಾ-ಕಾಲೇಜು, ದೇವಸ್ಥಾನಗಳ ನಾಮಫಲಕಗಳು, ಸ್ವಾಗತ ಕಮಾನು, ಬಸ್ಸು ತಂಗುದಾಣಗಳನ್ನು ಯಂತ್ರಗಳನ್ನು ಬಳಸಿ ಸ್ವಚ್ಛಗೊಳಿಸಿದರು. ಈ ಕಾರ್ಯಕ್ರಮಕ್ಕೆ ಕಲ್ಲುಗುಂಡಿ ವರ್ತಕರ ಸಂಘದ ಅಧ್ಯಕ್ಷ ನವಮಿ ಸ್ಟೋರ್ ಮಾಲೀಕ ಯು.ಬಿ.ಚಕ್ರಪಾಣಿ ಚಾಲನೆ ನೀಡಿದರು. ಈ ವೇಳೆ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ. ಹಮೀದ್, ಭಗವಾನ್ ಸಂಘ ಚೆಂಬು ಇದರ ಗೌರವಾಧ್ಯಕ್ಷ ಅನಂತ್ ಊರುಬೈಲು, ಅಧ್ಯಕ್ಷ ಶರತ್ ಕಾಸ್ಪಾಡಿ ಸ್ವಚ್ಛತಾ ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡಿದ್ದರು.
ಅನಂತ್ ಊರುಬೈಲು ನೇತೃತ್ವದ ಭಗವಾನ್ ಸಂಘದ ಯುವಕರು ತುರ್ತು ಪರಿಸ್ಥಿತಿ ಎದುರಾದಾಗ ಎಲ್ಲೇ ಇದ್ದರೂ ಒಂದು ಕಡೆ ಸೇರಿ ಕೈಗೊಳ್ಳಬಹುದಾದ ಮುಂದಿನ ಕಾರ್ಯದ ಬಗ್ಗೆ ಸಮಾಲೋಚನೆ ನಡೆಸುತ್ತಾರೆ. ವಿಶೇಷವೆಂದರೆ ತನ್ನ ಮನೆಯಲ್ಲಿ ಎಷ್ಟೇ ಕಷ್ಟವಿದ್ದರೂ ಯುವಕರು ಕಷ್ಟ ಅನ್ನುವ ಮತ್ತೊಬ್ಬರ ನೆರವಿಗೆ ಧಾವಿಸುತ್ತಾರೆ. ಗ್ರಾಮೀಣ ಭಾಗದಲ್ಲಿರುವ ಇಂತಹ ಯುವಕ ಸಂಘಗಳಿಗೆ ಸರ್ಕಾರ, ಜನಪ್ರತಿನಿಧಿಗಳು ಬಲ ತುಂಬಿದರೆ ತುರ್ತು ಪರಿಸ್ಥಿತಿಯ ಸಂದರ್ಭವನ್ನು ಸುಲಭವಾಗಿ ನಿಭಾಯಿಸಬಹುದು.