ನ್ಯೂಸ್ ನಾಟೌಟ್: ಕರಾವಳಿ ಹಾಗೂ ಮಲ್ನಾಡಿನ ಒಕ್ಕಲಿಗ ಗೌಡ ಜನಾಂಗವನ್ನು ಅವಹೇಳನ ಮಾಡಿದ ಹಾಡೊಂದನ್ನು ರಚಿಸಿ ಜಾಲತಾಣದಲ್ಲಿ ಹರಿಯಬಿಡಲಾಗಿದೆ. ತಿಂಗಳ ಹಿಂದೆ ಯೂಟ್ಯೂಬ್ ನಲ್ಲಿ ಈ ವಿಡಿಯೋ ಅಪ್ ಲೋಡ್ ಆಗಿದೆ. ಕಿಡಿಗೇಡಿಗಳ ಕೃತ್ಯಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಒಂದು ಕಡೆ ನಿರ್ದಿಷ್ಟ ಜನಾಂಗ ನಿಂದಿಸಿ ಖ್ಯಾತ ನಟ ಉಪೇಂದ್ರ ಅಡಕತ್ತರಿಗೆ ಸಿಕ್ಕಿದ್ದಾರೆ. ಇವರ ವಿರುದ್ಧ ಭಾರೀ ಟೀಕೆಗಳು ರಾಜ್ಯಾದ್ಯಂತ ಕೇಳಿ ಬಂದಿದೆ. ಮತ್ತೊಂದು ಕಡೆ ಈ ದೇಶಕ್ಕೆ ಅಪ್ರತಿಮ ಕೊಡುಗೆ ನೀಡಿದ ಮಹಾನ್ ನಾಯಕರು ಹುಟ್ಟಿದ ಗೌಡ ಜನಾಂಗವನ್ನೇ ಅವಹೇಳನ ಮಾಡಿರುವುದು ವಿಪರ್ಯಾಸ.
ಗೌಡ ಹೆಸರನ್ನು ಬಳಸಿಕೊಂಡು ಇಷ್ಟೆಲ್ಲ ಕಿತಾಪತಿಯನ್ನು ‘ಜೆಜಿ ಕ್ರಿಯೇಷನ್ಸ್’ ಅನ್ನುವ ಯುಟ್ಯೂಬ್ ಚಾನಲ್ ಮಾಡಿದೆ. ವಿಕೃತ ಹಾಡಿಗೆ ಸಾಹಿತ್ಯ -ಕಲ್ಪನೆ-ನಿರ್ದೇಶನವನ್ನ ವಿನಾಯಕ ಬಾಳೇಸರ ಅನ್ನುವ ವ್ಯಕ್ತಿ ಬರೆದಿದ್ದಾನೆ. ಆಶಾ ವಿನಾಯಕ, ಗೋಪಿ ಗೋಳಿ ಅನ್ನುವ ಇಬ್ಬರು ಕರ್ಕಶವಾಗಿ ಹಾಡಿದ್ದಾರೆ.
ಯಾವುದೇ ಕಾರಣಕ್ಕೂ ಪ್ರಬಲ ಒಕ್ಕಲಿಗ ಸಮುದಾಯ ಇಂತಹ ಅವಹೇಳನವನ್ನು ಸಹಿಸುವ ವಿಚಾರವಿಲ್ಲ. ಕವಿ ಕುವೆಂಪು, ಶ್ರೀ ಬಾಲಗಂಗಾಧರ ನಾಥ ಸ್ವಾಮೀಜಿ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿದಂತೆ ಹಲವು ಸಾಧಕ ನಾಯಕರನ್ನು ನೀಡಿದ ಒಕ್ಕಲಿಗ ಗೌಡ ಸಮುದಾಯವನ್ನ ಅವಹೇಳನ ಮಾಡುವ ಹಾಡನ್ನು ಬರೆದವರು ಹಾಗೂ ಪ್ರಸಾರ ಮಾಡಿದವರ ವಿರುದ್ಧ ಅಗತ್ಯ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಯುವ ಒಕ್ಕಲಿಗ ನಾಯಕರೊಬ್ಬರು ನ್ಯೂಸ್ ನಾಟೌಟ್ ಗೆ ತಿಳಿಸಿದ್ದಾರೆ.
ರಾಜ್ಯದಲ್ಲಿ ಒಕ್ಕಲಿಗ ಗೌಡ ಅನ್ನೋದು ಪ್ರಬಲ ಸಮುದಾಯ. ಹಾಸನದ ಐಗೂರು ಸೀಮೆಯಿಂದ ಬಂದ ಗೌಡ ಜನಾಂಗ ತುಳುನಾಡಿನ ಕರಾವಳಿಯಲ್ಲಿ ನೆಲೆಸಿದರು. ಇಲ್ಲಿನ ಸಂಸ್ಕೃತಿಯನ್ನು ಗೌರವಿಸಿ ಬೆಳೆದರು. ಮಹಾನ್ ನಗರ ಬೆಂಗಳೂರನ್ನು ಕಟ್ಟಿದ ಅಸಾಮಾನ್ಯ ನಾಯಕ ಕೆಂಪೇಗೌಡ, ಬ್ರಿಟಿಷರ ವಿರುದ್ಧ ಹೋರಾಡಿದ ವೀರ ಸ್ವಾತಂತ್ರ್ಯ ಸೇನಾನಿ ಕೆದಂಬಾಡಿ ರಾಮಯ್ಯ ಗೌಡ, ಮಾಜಿ ಪ್ರಧಾನಿ ದೇವೇಗೌಡ ಸೇರಿದಂತೆ ಹಲವು ಗೌಡ ಸಮುದಾಯದ ನಾಯಕರು ಸಮಸ್ತ ಒಕ್ಕಲಿಗರ ಸಾಧನೆಯ ಪ್ರತೀಕವಾಗಿದ್ದಾರೆ. ಮಾತ್ರವಲ್ಲ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಪ್ರಭಾವಿ ಸಚಿವ ಸ್ಥಾನಗಳನ್ನು ಒಕ್ಕಲಿಗ ಗೌಡ ಸಮುದಾಯದ ನಾಯಕರು ಅಲಂಕರಿಸಿದ್ದಾರೆ. ಜಾತಿ ಧರ್ಮದ ಎಲ್ಲೆ ಮೀರಿ ತ್ರಿವಿಧ ದಾಸ್ಸೋಹದಿಂದ ಸಾವಿರಾರು ವಿದ್ಯಾರ್ಥಿಗಳ ಬಾಳಲ್ಲಿ ಬೆಳಕಾಗಿದ್ದು ಒಕ್ಕಲಿಗ ಗೌಡ ಸಮುದಾಯದ ಪ್ರಬಲ ಮಠ ಶ್ರೀ ಆದಿಚುಂಚನಗಿರಿ. ಅಲ್ಲಿನ ಪರಮ ಪೂಜ್ಯ ಸ್ವಾಮೀಜಿ ಭೈರವೈಕ್ಯ ಶ್ರೀ ಬಾಲಗಂಗಾಧರ ನಾಥ ಸ್ವಾಮೀಜಿ ದೂರದೃಷ್ಟಿ ಲಕ್ಷಾಂತರ ಜನರ ಬಾಳಲ್ಲಿ ಬೆಳಕಾಗಿದೆ. ಇಂದು ಪರಮಪೂಜ್ಯ ಡಾ.ಶ್ರೀ ನಿರ್ಮಾಲಾನಂದನಾಥ ಮಹಾಸ್ವಾಮೀಜಿಗಳು ಧರ್ಮ ಕಾರ್ಯ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಶ್ರೀ ಆದಿಚುಂಚನಗಿರಿ ಸಮಸ್ತ ಧರ್ಮದ ಜನರಿಗೂ ಆಶ್ರಯ ನೀಡಿರುವ ಹೆಮ್ಮರ. ಈ ಮಠದ ನೆರಳಿನಲ್ಲಿ ನೂರಾರು ಮಂದಿ ಆಶ್ರಯ ಪಡೆಯುತ್ತಿದ್ದಾರೆ.
ಸಿನಿಮಾ, ಕ್ರೀಡೆ, ವಿಜ್ಞಾನ, ತಂತ್ರಜ್ಞಾನ, ಕಲೆ, ಸಾಹಿತ್ಯ, ರಾಜಕೀಯ ಸೇರಿದಂತೆ ಹತ್ತು ಹಲವು ಕ್ಷೇತ್ರದಲ್ಲಿ ಒಕ್ಕಲಿಗ ಗೌಡ ಸಮುದಾಯದ ಅನೇಕ ಯುವಕರು ಸಾಧನೆ ತೋರಿದ್ದಾರೆ. ಸಮಾಜದಲ್ಲಿ ‘ಗೌಡ’ ಅನ್ನುವ ಪದ ಇಂತಹ ಸಾಧಕರಿಂದಲೇ ಶ್ರೀಮಂತವಾಗಿದೆ. ಆದರೆ ಕೆಲವರು ತಮ್ಮ ತೆವಲಿಗೆ ಯೂಟ್ಯೂಬ್ ನಲ್ಲಿ ಹೆಚ್ಚು ವೀಕ್ಷಣೆ ಸಿಗಲಿ ಅನ್ನೋದಕ್ಕೆ ಬಹು ಸಂಖ್ಯಾತ ಪ್ರಬಲ ಒಕ್ಕಲಿಗ ಗೌಡರನ್ನು ಅವಹೇಳನ ಮಾಡಿಕೊಂಡು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ಇಂತಹ ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮದ ಒತ್ತಾಯ ಕೇಳಿ ಬಂದಿದೆ.