ನ್ಯೂಸ್ ನಾಟೌಟ್: “ಮಾಧ್ಯಮಗಳು ವಿವಿಧ ಸಮಾಜ ಮುಖಿ ಹೋರಾಟಗಳಲ್ಲಿ ಪಾಲ್ಗೊಳ್ಳುತ್ತವೆ. ಉತ್ತಮ ಸಂದೇಶಗಳನ್ನು ಸಮಾಜಕ್ಕೆ ನೀಡುತ್ತಾ ಬೆಳೆಯುತ್ತವೆ. ಹೀಗಿರುವಾಗ ಸ್ಥಳೀಯ ಮುದ್ರಣ ಮಾಧ್ಯಮವೊಂದು ಜಾಹೀರಾತು ನೀಡದೆ ನ್ಯೂಸ್ ಹಾಕುವುದಿಲ್ಲ ಅನ್ನುವ ಧೋರಣೆ ಇಟ್ಟುಕೊಂಡಿರುವುದು ವಿಪರ್ಯಾಸ. ಇನ್ನಾದರೂ ಅಂತಹ ಪತ್ರಿಕೆಗಳು ತಮ್ಮ ನಿಲುವನ್ನು ಬದಲಾಯಿಸಿಕೊಳ್ಳಬೇಕು” ಎಂದು ದೇವಚಳ್ಳ ಗ್ರಾ.ಪಂ. ಸದಸ್ಯ ಶೈಲೇಶ್ ಅಂಬೆಕಲ್ಲು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
“ಇಂದಿನ ದಿನದಲ್ಲಿ ಜಾಹೀರಾತು ಸಿಗದೆ ಪತ್ರಿಕೆಗಳನ್ನು ನಡೆಸಲು ಸಾಧ್ಯವಾಗುವುದಿಲ್ಲ ಅನ್ನುವುದು ಗೊತ್ತಿದೆ. ನಾನೂ ಕೂಡ ಸುಳ್ಯದಲ್ಲಿ ಪತ್ರಿಕೆ ನಡೆಸುವ ತಂಡದಲ್ಲಿ ಇದ್ದುದರಿಂದ ಎಲ್ಲ ಸವಾಲಿನ ಬಗ್ಗೆ ಅರಿತಿದ್ದೇನೆ. ಆದರೆ ಮಾಧ್ಯಮವೊಂದು ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತವೆ ಎಂದು ಹೇಳಿಕೊಳ್ಳುವುದಲ್ಲದೆ ಜಾಹೀರಾತು ನೀಡಿದರೆ ಮಾತ್ರವೇ ನ್ಯೂಸ್ ಹಾಕುತ್ತೇವೆ ಎಂದು ಹೇಳುತ್ತಿದೆ. ಇದಕ್ಕೆ ನನ್ನ ಆಕ್ಷೇಪವಿದೆ. ವಿವಿಧ ಮಾಧ್ಯಮಗಳಲ್ಲಿ ನನಗೆ ಮಿತ್ರರಿದ್ದಾರೆ. ಆದರೆ ಅವರ್ಯಾರು ಜಾಹೀರಾತು ನೀಡಿದರೆ ಮಾತ್ರ ಸುದ್ದಿಗಳನ್ನು ಪತ್ರಿಕೆಯಲ್ಲಿ ಪ್ರಕಟಿಸುತ್ತೇವೆ ಎಂದು ಹೇಳಿಲ್ಲ. ಭ್ರಷ್ಟಾಚಾರದ ಹೋರಾಟದಲ್ಲಿರುವ ಪತ್ರಿಕೆಗೆ ಬರುವ ಜಾಹೀರಾತು ಮೂಲಗಳು ಕೂಡಾ ಭ್ರಷ್ಟಾಚಾರ ರಹಿತವಾಗಿದ್ದರೆ ಮಾತ್ರವೇ ನಿಜವಾದ ಉದ್ದೇಶ ಸಾಕಾರವಾಗಬಹುದು. ನಾನು ಹೇಳುವುದು ಒಂದೇ ,ಜಾಹೀರಾತು ನೀಡದೇ ನ್ಯೂಸ್ ಹಾಕುವುದಿಲ್ಲ ಎನ್ನುವ ಧೋರಣೆಯನ್ನು ಮೊದಲು ಬದಲಾಯಿಸಿಕೊಂಡು ಬದುಕುವುದನ್ನು ಕಲಿಯಬೇಕು ಎಂದು ಶೈಲೇಶ್ ಅಂಬೆಕಲ್ಲು ತಿಳಿಸಿದ್ದಾರೆ.