ಕರಾವಳಿ

ಸೌಜನ್ಯ ಹತ್ಯೆ ಪ್ರಕರಣದ ಆರೋಪಿಗಳಿಗೆ ದೈವದ ಮೆಟ್ಟಿಲಲ್ಲಿ ಸಿಗುವುದೇ ತೀರ್ಪು..? ಧೀರಜ್ ಜೈನ್, ಮಲ್ಲಿಕ್ ಜೈನ್, ಉದಯ ಜೈನ್ ಆಣೆ ಪ್ರಮಾಣದ ಬೆನ್ನಲ್ಲೇ ಕಾನತ್ತೂರಿನ ದೈವ ಸನ್ನಿಧಿಯತ್ತ ಹೊರಟ ಸೌಜನ್ಯ ಕುಟುಂಬ

ನ್ಯೂಸ್ ನಾಟೌಟ್: ಸೌಜನ್ಯ ಭೀಕರ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ದಿನಕ್ಕೊಂದು ಬೆಳವಣಿಗೆ ನಡೆಯುತ್ತಿದೆ. ಸಿಬಿಐ ವಿಶೇಷ ನ್ಯಾಯಾಲಯ ಸಂತೋಷ್ ರಾವ್ ನಿರಪರಾಧಿ ಅನ್ನುವ ಆದೇಶ ನೀಡಿದ ಬೆನ್ನಲ್ಲೇ ನಿಜವಾದ ಅಪರಾಧಿ ಯಾರು? ಅನ್ನುವ ಪ್ರಶ್ನೆ ಎದ್ದಿದೆ. ಈ ಪ್ರಶ್ನೆಯ ಜೊತೆಗೆ ಇದೀಗ ಪ್ರಕರಣ ಕಾನತ್ತೂರಿನ ಪವರ್ ಫುಲ್ ದೈವಗಳ ಮೆಟ್ಟಿಲೇರಿದೆ.

ಆಣೆ ಪ್ರಮಾಣದ ಮೂಲಕ ತಮ್ಮದೇನು ತಪ್ಪಿಲ್ಲ ಸೌಜನ್ಯ ಪ್ರಕರಣಕ್ಕೂ ನಮಗೂ ಯಾವುದೇ ಸಂಬಂಧವಿಲ್ಲವೆಂದು ಧೀರಜ್ ಜೈನ್, ಮಲ್ಲಿಕ್ ಜೈನ್, ಉದಯ ಜೈನ್ ಕಾನತ್ತೂರಿನ ದೈವಗಳ ಎದುರು ಗುರುವಾರ ಪ್ರಮಾಣ ಮಾಡಿ ಬಂದಿದ್ದಾರೆ. ಈ ಬೆನ್ನಲ್ಲೇ ಸೌಜನ್ಯ ಕುಟುಂಬವೂ ಕಾನತ್ತೂರಿನಲ್ಲಿ ಪ್ರಮಾಣ ಮಾಡುವುದಕ್ಕೆ ಎಲ್ಲ ಸಿದ್ಧತೆಗಳನ್ನು ನಡೆಸಿ ಕೊಂಡಿದೆ. ಈ ಪ್ರಕಾರವಾಗಿ ಶುಕ್ರವಾರ ಅಥವಾ ಶನಿವಾರ ನಾವು ಕಾನತ್ತೂರಿಗೆ ತೆರಳಿ ಸೌಜನ್ಯ ಹಂತಕರಿಗೆ ಸರಿಯಾದ ಶಿಕ್ಷೆಯಾಗಬೇಕು ಎಂದು ದೇವರ ಮುಂದೆ ಆಣೆ ಪ್ರಮಾಣ ಮಾಡುತ್ತೇವೆ ಎಂದು ಮೃತ ಸೌಜನ್ಯಳ ಮಾವ ವಿಠಲ ಗೌಡ ನ್ಯೂಸ್ ನಾಟೌಟ್‌ ಗೆ ತಿಳಿಸಿದ್ದಾರೆ.

ದೈವದ ಎದುರು ನಮಗೆ ನ್ಯಾಯ ಸಿಗುತ್ತದೆ ಅನ್ನುವ ಧೈರ್ಯವಿದೆ. ಆ ಧೈರ್ಯದಲ್ಲೇ ನಾವು ಅಲ್ಲಿಗೆ ಹೋಗಿ ಆಣೆ ಪ್ರಮಾಣ ಮಾಡಿ ಬರುತ್ತೇವೆ, ಸೌಜನ್ಯ ಹಂತಕರು ಅವರು ಯಾರೇ ಆಗಿರಲಿ. ಅವರಿಗೆ ತಕ್ಕ ಶಿಕ್ಷೆಯಾಗಬೇಕು, ನಾವು ಪ್ರತಿ ದಿನ ಜೀವ ಭಯದಿಂದ ಬದುಕುತ್ತಿದ್ದೇವೆ. ನಮಗೆ ಆದಂತಹ ಅನ್ಯಾಯ ಮುಂದೆ ಯಾರಿಗೂ ಆಗಬಾರದು ಎಂದು ವಿಠಲ ಗೌಡ ನ್ಯೂಸ್ ನಾಟೌಟ್ ಜೊತೆಗೆ ತಮ್ಮ ನೋವು ತೋಡಿಕೊಂಡರು.

ಸೌಜನ್ಯ ಹತ್ಯೆ ಪ್ರಕರಣದಲ್ಲಿ ತಮ್ಮ ಹೆಸರು ಕೇಳಿ ಬಂದಿರುವ ಕಾರಣಕ್ಕೆ ಧೀರಜ್ ಜೈನ್, ಮಲ್ಲಿಕ್ ಜೈನ್, ಉದಯ ಜೈನ್ ಕಾನತ್ತೂರಿನ ದೈವದ ಎದುರು ಆಣೆ ಪ್ರಮಾಣ ಮಾಡಿ ಬಂದಿದ್ದಾರೆ. ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಈ ಮೂವರು ನಾವು ತಪ್ಪು ಮಾಡಿಲ್ಲ. ಸೌಜನ್ಯ ಹತ್ಯೆಗೂ ನಮಗೂ ಯಾವುದೇ ಸಂಬಂಧವಿಲ್ಲ. ನಮ್ಮ ಹೆಸರು ಹೇಳಿಕೊಂಡು ಮಹೇಶ್ ಶೆಟ್ಟಿ ತಿಮರೋಡಿ, ವಿಠಲ ಗೌಡ ಹಾಗೂ ಸೌಜನ್ಯ ಕುಟುಂಬ ತೇಜೋವಧೆಗೆ ಯತ್ನಿಸುತ್ತಿದೆ. ನಿರಂತರವಾದ ಅವರ ಆರೋಪಗಳಿಂದ ಮಾನಸಿಕವಾಗಿ ಹಿಂಸೆ ಅನುಭವಿಸುತ್ತಿದ್ದೇವೆ. ಈ ಕಾರಣದಿಂದ ಇದೀಗ ಮಹೇಶ್ ಶೆಟ್ಟಿ ತಿಮರೋಡಿ, ವಿಠಲ ಗೌಡ ಹೇಳಿದಂತೆ ಕಾನತ್ತೂರಿನಲ್ಲಿ ಬಂದು ನಾವು ಆಣೆ ಪ್ರಮಾಣ ಮಾಡಿದ್ದೇವೆ. ಧೈರ್ಯವಿದ್ದರೆ ಮಹೇಶ್ ಶೆಟ್ಟಿ ತಿಮರೋಡಿ, ವಿಠಲ ಗೌಡ ಅವರೂ ಕೂಡ ಬಂದು ಪ್ರಮಾಣ ಮಾಡಲಿ ಎಂದು ಧೀರಜ್ ಜೈನ್, ಮಲ್ಲಿಕ್ ಜೈನ್, ಉದಯ ಜೈನ್ ಸವಾಲು ಹಾಕಿದ್ದಾರೆ.

ಧೀರಜ್ ಜೈನ್, ಮಲ್ಲಿಕ್ ಜೈನ್, ಉದಯ ಜೈನ್ ಪ್ರಸಿದ್ಧ ಕ್ಷೇತ್ರ ಕಾಸರಗೋಡಿನ ಕಾನತ್ತೂರು ಶ್ರೀ ನಾಲ್ವರ್ ದೇವಸ್ಥಾನಮ್ ಸನ್ನಿಧಿಗೆ ತೆರಳಿ ಆಣೆ ಪ್ರಮಾಣ ಮಾಡುವುದಕ್ಕೆ ಒಂದು ದಿನಾಂಕ ನಿಗದಿ ಮಾಡಬೇಕೆಂದು ಮನವಿ ಮಾಡಿಕೊಂಡಿದ್ದರು. ಇದಕ್ಕೆ ಉತ್ತರಿಸಿದ್ದ ಆಡಳಿತ ಮಂಡಳಿ ಈಗಾಗಲೇ ನೀವು ಒಮ್ಮೆ ಬಂದು ದೂರು ನೀಡಿದ್ದೀರಿ. ಅದು ಅರ್ಧದಲ್ಲೇ ನಿಂತಿರುತ್ತದೆ. ಮತ್ತೊಮ್ಮೆ ನೀವು ಆಣೆ ಪ್ರಮಾಣ ಮಾಡುವುದಿದ್ದಲ್ಲಿ ಎರಡೂ ಕಡೆಯವರು ಬಂದು ನಿಮ್ಮ ಸ್ವ-ಇಚ್ಛೆಯಿಂದ ಮಾಡಬಹುದು ಎಂದು ತಿಳಿಸಿದ್ದಾರೆ. ಹೀಗಾಗಿ ನಾವು ಮಂಗಳವಾರ ಪ್ರಮಾಣ ಮಾಡಿ ಬಂದಿದ್ದೇವೆ ಎಂದು ಧೀರಜ್ ಜೈನ್, ಮಲ್ಲಿಕ್ ಜೈನ್, ಉದಯ ಜೈನ್ ತಿಳಿಸಿದ್ದಾರೆ. ಸದ್ಯ ದೈವದ ಚಾವಡಿಯ ಎದುರು ನಿಂತು ಆಣೆ ಪ್ರಮಾಣವನ್ನು ಮಾಡಲಾಯಿತು. ಧೀರಜ್ ಜೈನ್, ಮಲ್ಲಿಕ್ ಜೈನ್, ಉದಯ ಜೈನ್ ತಾವು ಸೌಜನ್ಯ ಪ್ರಕರಣದಲ್ಲಿ ತಪ್ಪು ಮಾಡಿಲ್ಲ ಎಂದು ದೈವದ ಎದುರು ಪ್ರಾರ್ಥನೆ ಮಾಡಿದ್ದಾರೆ.

ಧೀರಜ್ ಜೈನ್, ಮಲ್ಲಿಕ್ ಜೈನ್, ಉದಯ ಜೈನ್ ಕಾನತ್ತೂರು ಶ್ರೀ ನಾಲ್ವರ್ ದೇವಸ್ಥಾನಮ್ ಸನ್ನಿಧಿಗೆ ತೆರಳಿ ಆಣೆ ಪ್ರಮಾಣ ಮಾಡಿದ್ದಾರೆ. ಈ ಕುರಿತ ಫೋಟೋಗಳು ಕೂಡ ವೈರಲ್ ಆಗಿದೆ. ಈ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಜನರು ಈ ಮೂವರಿಗೂ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ನೀವು ಆಣೆ ಪ್ರಮಾಣ ಏನೆಂದು ಮಾಡಿದ್ದೀರಿ? ಅದರ ವಿಡಿಯೋವನ್ನು ಸಾರ್ವಜನಿಕರ ಎದುರಿಗೆ ಪ್ರಕಟಿಸಬೇಕು. ದೈವರ ಎದುರು ನಿಂತ ಫೋಟೋಗಳನ್ನು ಪ್ರಕಟಿಸಿದರೆ ಸಾಲು ಎಂದು ತಿಳಿಸಿದ್ದಾರೆ.

Related posts

ಮಲೆನಾಡಿನಲ್ಲಿ ಮತ್ತೆ ಕಾಣಿಸಿಕೊಂಡ ಮಂಗನ ಕಾಯಿಲೆ..! ಕಳೆದ ವರ್ಷ 132 ಜನರಿಗೆ ಬಾಧಿಸಿದ್ದ ಖಾಯಿಲೆ 4 ಜನರನ್ನು ಬಲಿ ಪಡೆದಿತ್ತು..!

ಮಹಿಳೆಯನ್ನು ಅಲ್ಯೂಮಿನಿಯಂ ಪಾತ್ರೆಯಲ್ಲಿ ಕೂರಿಸಿ ಹೊಳೆ ದಾಟಿಸಿದ ವ್ಯಕ್ತಿ..! ಇಲ್ಲಿದೆ ಮನಕಲಕುವ ಘಟನೆ..!

ಗ್ರಾಮೀಣ ಜನರಿಗೆ ಅತ್ಯುತ್ತಮ ಸೇವೆ : ಶಾಸಕ ಅಶೋಕ್ ರೈ