ನ್ಯೂಸ್ ನಾಟೌಟ್ : ತೀವ್ರ ಜಿದ್ದಾಜಿದ್ದಿನ ಕೂಡಿದ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮಕಾಡೆ ಮಲಗಿದೆ. ಅಶೋಕ್ ಕುಮಾರ್ ರೈ ಗೆಲ್ಲುವ ಮೂಲಕ ಕಾಂಗ್ರೆಸ್ ವಿಜೃಂಭಿಸಿದೆ. ಪಕ್ಷೇತರ ಅಭ್ಯರ್ಥಿ ಅರುಣ್ ಪುತ್ತಿಲ ಅಲ್ಪ ಮತಗಳ ಅಂತರದಿಂದ ಸೋತಿದ್ದಾರೆ. ಈ ಮೂಲಕ ಇಬ್ಬರ ಜಗಳ ಮೂರನೆಯವನಿಗೆ ಲಾಭ ಆಗಿದೆ.
ಬಿಜೆಪಿ ಹಾಗೂ ಅರುಣ್ ಪುತ್ತಿಲ ನಡುವಿನ ತಿಕ್ಕಾಟದಲ್ಲಿ ಕಾಂಗ್ರೆಸ್ ಗೆ ಭಾರೀ ಲಾಭವಾಗಿದೆ. ಅರುಣ್ ಪುತ್ತಿಲ ಪುತ್ತೂರಿನಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಕರಾವಳಿಯ ನಾಯಕರೊಬ್ಬರ ಆಟದಿಂದ ಪುತ್ತಿಲಗೆ ಕೊನೆಯ ಕ್ಷಣದಲ್ಲಿ ಟಿಕೆಟ್ ಕೈ ತಪ್ಪಿತ್ತು. ಆಶಾ ತಿಮ್ಮಪ್ಪ ಅವರಿಗೆ ಟಿಕೇಟ್ ಲಭಿಸಿತ್ತು. ಇದರಿಂದ ಅರುಣ್ ಕುಮಾರ್ ಪುತ್ತಿಲ ಸಿಡಿದಿದ್ದರು. ತಮ್ಮ ಬೆಂಬಲಿಗರ ಜತೆಗೂಡಿ ಸಮಾಲೋಚಿಸಿದರು. ಬ್ಯಾಟ್ ಹಿಡಿದು ಚುನಾವಣಾ ಕಣಕ್ಕೆ ಇಳಿಯಲು ನಿರ್ಧರಿಸಿದರು. ಎಲ್ಲ ಅಂದುಕೊಂಡಂತೆ ನಡೆಯಿತು. ಆರಂಭದಲ್ಲಿ ಪುತ್ತಿಲ ಮುನ್ನಡೆ ಪಡೆದುಕೊಂಡಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಅಶೋಕ್ ರೈ 64,687 ಮತವನ್ನು ಪಡೆದು ರೋಚಕ ಗೆಲುವು ಸಾಧಿಸಿದ್ದಾರೆ. ಬಿಗುವಿನ ಫೈಟ್ ಕೊಟ್ಟ ಅರುಣ್ ಪುತ್ತಿಲ 61,336 ಮತವನ್ನು ಪಡೆದುಕೊಂಡು ಕೆಲವೇ ಸಾವಿರ ಮತದಿಂದ ಸೋಲು ಅನುಭವಿಸಿದ್ದಾರೆ. ಬಿಜೆಪಿಯಿಂದ ಆಶಾ ತಿಮ್ಮಪ್ಪ ಗೌಡ 36526 ಮತವನ್ನು ಪಡೆದುಕೊಂಡು ಹೀನಾಯ ಸೋಲು ಅನುಭವಿಸಿದ್ದಾರೆ.