ನ್ಯೂಸ್‌ನಾಟೌಟ್: ದೆಹಲಿಯ ಮಂಗೋಲ್‌ಪುರಿ ಮೇಲ್ಸೇತುವೆ ಬಳಿ ವ್ಯಕ್ತಿಯೊಬ್ಬ ಮಹಿಳೆಯನ್ನು ಥಳಿಸಿ ಬಲವಂತವಾಗಿ ಕಾರಿನೊಳಗೆ ತಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಘಟನೆ ಮಾರ್ಚ್ ೧೮ರಂದು ದೆಹಲಿಯಲ್ಲಿ ನಡೆದಿದ್ದು, ವಾಹನ ಮತ್ತು ಚಾಲಕನನ್ನು ಪತ್ತೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
“ಪ್ರಾಥಮಿಕ ತನಿಖೆಯಲ್ಲಿ, ಕಾರನ್ನು ಗುರುಗ್ರಾಮ್‌ನ ರತನ್ ವಿಹಾರ್‌ನಲ್ಲಿ ನೋಂದಾಯಿಸಲಾಗಿದೆ ಎಂದು ಕಂಡುಬಂದಿದೆ, ಅಲ್ಲಿ ಸಿಬ್ಬಂದಿಯ ತಂಡವನ್ನು ಕಳುಹಿಸಲಾಗಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವ ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಮಹಿಳೆಯ ಕಾಲರ್ ಹಿಡಿದು ಥಳಿಸಿ, ಜನನಿಬಿಡ ರಸ್ತೆಯಲ್ಲಿ ಬಲವಂತವಾಗಿ ಕಾರಿನೊಳಗೆ ಕೂರುವಂತೆ ಮಾಡಿರುದು ವಿಡಿಯೋದಲ್ಲಿ ಕಾಣಬಹುದು. ಮಹಿಳೆಯನ್ನು ಕಾರಿನೊಳಗೆ ತಳ್ಳಿದ ನಂತರ, ಒಬ್ಬ ವ್ಯಕ್ತಿ ಮುಂಭಾಗದ ಸೀಟಿನಲ್ಲಿ ಕುಳಿತುಕೊಳ್ಳಲು ಹೋದರೆ, ಇನ್ನೊಬ್ಬ ವ್ಯಕ್ತಿ ಕಾರಿನೊಳಗೆ ಬಂದು ಮಹಿಳೆಯ ಪಕ್ಕದಲ್ಲಿ ಕುಳಿತುಕೊಳ್ಳುತ್ತಾನೆ.
ಪೊಲೀಸರ ಪ್ರಕಾರ, ಇಬ್ಬರು ಪುರುಷರು ಮತ್ತು ಮಹಿಳೆ ರೋಹಿಣಿ ನಗರದಿಂದ ವಿಕಾಸಪುರಿಗೆ ಉಬರ್ ಕಾರನ್ನು ಬುಕ್ ಮಾಡಿದ್ದರು ಮತ್ತು ದಾರಿಯಲ್ಲಿ ಅವರ ನಡುವೆ ಯಾವುದೋ ಕಾರಣಕ್ಕೆ ಮಾರಾಮಾರಿ ನಡೆದಿದೆ. ಚಾಲಕ ಮತ್ತು ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.