ನ್ಯೂಸ್ ನಾಟೌಟ್: ಹಲವು ಅಪರಾಧ ಪ್ರಕರಣಗಳನ್ನು ಭೇದಿಸಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಮುಂಚೂಣಿಯ ಪಾತ್ರವಹಿಸಿದ ಸುಳ್ಯದ ಪೊಲೀಸ್ ವೃತ್ತ ನಿರೀಕ್ಷಕ ರವೀಂದ್ರ ಸಿಎಂ ಹಾಗೂ ಪೊಲೀಸ್ ಸಬ್ ಇನ್ಸ್ಪೆಕ್ಟರ್ ದಿಲೀಪ್ ಜಿ.ಆರ್ ಅವರನ್ನು ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ತಲಾ ಬೆಳ್ಳಿ ಪದಕ ನೀಡಿ ಗೌರವಿಸಿದ್ದಾರೆ.
ಶುಕ್ರವಾರ ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ೭೫ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಬೆಳ್ಳಿ ಪದಕವನ್ನು ಹಸ್ತಾಂತರಿಸಲಾಯಿತು. ಇದೇ ವೇಳೆ ಕರ್ತವ್ಯ ನಿಷ್ಠೆ ಮೆರೆದ ಪೊಲೀಸ್ ಸಿಬ್ಬಂದಿಯನ್ನೂ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಗಿದೆ. ಸುಳ್ಯ ತಾಲೂಕಿನ ಸಂಪಾಜೆಯಲ್ಲಿ ನಡೆದ ದರೋಡೆ ಪ್ರಕರಣ, ಸುಳ್ಯದಲ್ಲಿ ನಡೆದಿದ್ದ ಶೂಟೌಟ್ ಪ್ರಕರಣ, ಹಲವು ಕೊಲೆ ಪ್ರಕರಣಗಳನ್ನು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಅಪರಾಧಿಗಳನ್ನು ಕಂಡು ಹಿಡಿಯುವಲ್ಲಿ ಸಾಧನೆ ಮೆರೆದ ಪೊಲೀಸರ ಕರ್ತವ್ಯನಿಷ್ಠೆಯನ್ನು ಶ್ಲಾಘಿಸಿದ್ದಾರೆ. ಧನೇಶ್ (ಎಚ್ಸಿ), ಉಮೇಶ್ (ಎಚ್ಸಿ), ಅನೀಲ್ (ಪಿಸಿ), ಸುನಿಲ್ (ಪಿಸಿ) ಗೃಹ ಸಚಿವರಿಂದ ಪ್ರಶಂಸನಾ ಪತ್ರವನ್ನು ಪಡೆದುಕೊಂಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.