ನ್ಯೂಸ್ ನಾಟೌಟ್: ಬಂಡುಕೋರರ ದಾಳಿಯಿಂದ ಸಿರಿಯಾ ಅಧ್ಯಕ್ಷ ಪಲಾಯನದ ಬಳಿಕ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಅಸ್ಸಾದ್ ಸರ್ಕಾರ ಪತನಗೊಂಡಿದೆ. ಬಂಡುಕೋರರು ರಾಜಧಾನಿ ಡಮಾಸ್ಕಸ್ ಸೇರಿದಂತೆ ಬಹುತೇಕ ಎಲ್ಲಾ ಪ್ರದೇಶಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಲ್ಲಿಯ ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿರುವ ಭಾರತವು 75 ಭಾರತೀಯರನ್ನು ಇದೀಗ ಸುರಕ್ಷಿತವಾಗಿ ಲೆಬನಾನ್ ಗೆ ಸ್ಥಳಾಂತರ ಮಾಡಿದ್ದು, ಶೀಘ್ರವೇ ಭಾರತಕ್ಕೆ ಕರೆತರಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ರಾಜಧಾನಿ ಡಮಾಸ್ಕಸ್ ನಿಂದ 10 ಕಿಲೋಮೀಟರ್ ದೂರದಲ್ಲಿರುವ ಮತ್ತೊಂದು ಪಟ್ಟಣವಾದ ಸೈದಾ ಜೈನಾಬ್ ನಲ್ಲಿ ಯಾತ್ರಿಕರು ಸಿಲುಕಿಕೊಂಡಿದ್ದರು. ಸಿರಿಯಾದಲ್ಲಿನ ಪ್ರಸ್ತುತ ಭದ್ರತಾ ಪರಿಸ್ಥಿತಿ ಮತ್ತು ಭಾರತೀಯ ನಾಗರಿಕರ ನಿರಂತರ ವಿನಂತಿ ಬಳಿಕ ಅವರನ್ನು ಸ್ಥಳಾಂತರಿಸುವ ಕಾರ್ಯಕ್ಕೆ ಒಪ್ಪಿಗೆ ನೀಡಲಾಗಿತ್ತು.
ದಂಗೆಯ ನಂತರದ ಸೂಕ್ಷ್ಮ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಭಾರತ ಸರ್ಕಾರವು ಇನ್ನೂ ಸಿರಿಯಾದಲ್ಲಿ ವಾಸಿಸುವ ಭಾರತೀಯ ನಾಗರಿಕರಿಗೆ ಎಚ್ಚರಿಕೆ ವಹಿಸಲು ಸಲಹೆ ನೀಡಿದೆ. ಡಮಾಸ್ಕಸ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿರಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಮಾರ್ಗಸೂಚಿಗಳ ಬಗ್ಗೆಯೂ ಗಮನ ಹರಿಸುವಂತೆ ಮನವಿ ಮಾಡಲಾಗಿದೆ.
ಬಂಡುಕೋರರು ರಾಜಧಾನಿ ಡಮಾಸ್ಕಸ್ ಅನ್ನು ವಶಪಡಿಸಿಕೊಂಡ ನಂತರ ಅಸ್ಸಾದ್ ತನ್ನ ಕುಟುಂಬದೊಂದಿಗೆ ಸಿರಿಯಾದಿಂದ ಪಲಾಯನ ಮಾಡಿದರು. ಅವರು ಪಲಾಯನ ಮಾಡಿದ ವಿಮಾನವು ರಾಡಾರ್ ಸಂಪರ್ಕವನ್ನು ಕಳೆದುಕೊಂಡಿದೆ ಎಂಬ ವರದಿಗಳೂ ಇವೆ.
ಅವರು ವಿಮಾನ ಅಪಘಾತದಲ್ಲಿ ಸಾವನ್ನಪ್ಪಿರಬಹುದು ಎಂಬ ಊಹಾಪೋಹವೂ ಇತ್ತು. ಆದಾಗ್ಯೂ, ರಾಯಿಟರ್ಸ್ ವರದಿಯ ಪ್ರಕಾರ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಸ್ಸಾದ್ ಮತ್ತು ಅವರ ಕುಟುಂಬಕ್ಕೆ ರಾಜಕೀಯ ಆಶ್ರಯ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.