ನ್ಯೂಸ್ ನಾಟೌಟ್ : ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ 300 ಅಡಿ ಆಳದ ಕಂದಕಕ್ಕೆ ಸೇನಾ ವಾಹನ (Indian Army) ಬಿದ್ದು ಬೆಳಗಾವಿ ಮೂಲದ ಯೋಧ ಸೇರಿದಂತೆ ಐವರು ಹುತಾತ್ಮರಾಗಿದ್ದಾರೆ.
ಚಿಕ್ಕೋಡಿ ( ತಾಲೂಕಿನ ಕುಪ್ಪನವಾಡಿ ಗ್ರಾಮದ ಧರ್ಮರಾಜ ಸುಭಾಷ ಖೋತ ಮೃತ ಯೋಧ ಎಂದು ಗುರುತಿಸಲಾಗಿದೆ. ಮಂಗಳವಾರ ಜಮ್ಮು ಮತ್ತು ಕಾಶ್ಮೀರದ ಪೂಂಚ್ ನಲ್ಲಿ ಸೇನಾ ಟ್ರಕ್ ರಸ್ತೆಯಿಂದ ಸ್ಕಿಡ್ ಆಗಿ ಕಂದಕಕ್ಕೆ ಬಿದ್ದಿತ್ತು.
ಘರೋವಾ ಪ್ರದೇಶದಲ್ಲಿ ಸಂಜೆ 5:20 ರ ಸುಮಾರಿಗೆ ಆರು ವಾಹನಗಳ ಬೆಂಗಾವಲು ಪಡೆಯ ಭಾಗವಾಗಿದ್ದ ಸೇನಾ ವಾಹನವು ಜಿಲ್ಲೆಯ ಬನೋಯ್‌ಗೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
11 ಮದ್ರಾಸ್ ಲೈಟ್ ಇನ್ ಫೆಂಟ್ರಿಗೆ ಸೇರಿದ ವಾಹನವು ನಿಲಂ ಪ್ರಧಾನ ಕಛೇರಿಯಿಂದ ಬಲ್ನೋಯಿ ಘೋರಾ ಪೋಸ್ಟ್‌ಗೆ ತೆರಳುತ್ತಿದ್ದಾಗ ಘಟನೆ ನಡೆದಿದೆ. ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. ಗಾಯಗೊಂಡ ಸಿಬ್ಬಂದಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸೇನೆ ತಿಳಿಸಿದೆ.