ನ್ಯೂಸ್ ನಾಟೌಟ್: ಪೊಲೀಸರು ಹಗಲು-ರಾತ್ರಿ ಎನ್ನದೆ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವುದಕ್ಕೆ ದುಡಿಯುತ್ತಿರುತ್ತಾರೆ. ಅಂತಹ ಪೊಲೀಸರು ಹಲವು ಸಲ ಕರ್ತವ್ಯದ ಒತ್ತಡದಿಂದ ಉನ್ನತ ಶಿಕ್ಷಣದ ಕನಸನ್ನು ಅರ್ಧದಲ್ಲಿಯೇ ಮೊಟಕುಗೊಳಿಸುತ್ತಾರೆ. ಆದರೆ ಇಲ್ಲೊಬ್ಬರು ಪೊಲೀಸ್ ಪೇದೆ ಕರ್ತವ್ಯದ ನಡುವೆಯೂ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಪರೀಕ್ಷೆ ತೆಗೆದುಕೊಂಡು ಹಠದಿಂದ ಓದಿ ಇದೀಗ MA ರಾಜ್ಯ ಶಾಸ್ತ್ರದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಈ ಸಾಧನೆ ಮಾಡಿರುವ ಪೊಲೀಸ್ ಕಾನ್ಸ್ಟೇಬಲ್ಗೆ ಎಲ್ಲೆಡೆಯಿಂದ ಮೆಚ್ಚುಗೆಗಳ ಸುರಿಮಳೆ ಸುರಿದಿದೆ
ಹೆಸರು ಮಧು ಜಿ. ಡಿ, 26 ವರ್ಷ. ಇವರು ಮೂಲತಃ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದವರು. ಕಳೆದ ಐದು ವರ್ಷಗಳಿಂದ ಸುಳ್ಯ ಪೊಲೀಸ್ ಠಾಣೆಯಲ್ಲಿ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಇವರು ಬಾಲ್ಯದಿಂದಲೂ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರು. ಓದಿನಲ್ಲಿ ಸಾಕಷ್ಟು ಮುಂದಿದ್ದರು. ಆದರೆ ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಸರಿಯಾಗಿ ಇಲ್ಲದಿದ್ದುದರಿಂದ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ ಪೊಲೀಸ್ ಇಲಾಖೆಯ ಪರೀಕ್ಷೆ ಬರೆದು ಪಾಸಾದರು. ವೃತ್ತಿಯಲ್ಲಿ ಇದ್ದಾಗ ಇವರಿಗೆ ಉನ್ನತ ಶಿಕ್ಷಣ ಪಡೆಯಬೇಕು ಅನ್ನುವ ಕನಸು ಚಿಗುರಿತು. ಹೀಗಾಗಿ ಅವರು ಮೈಸೂರು ರಾಜ್ಯಮುಕ್ತ ವಿಶ್ವವಿದ್ಯಾನಿಲಯದ 2021-22ನೇ ಸಾಲಿನ MA ರಾಜ್ಯ ಶಾಸ್ತ್ರ ವಿಭಾಗದಲ್ಲಿ ಪರೀಕ್ಷೆ ಬರೆದರು. ಅದರ ಫಲಿತಾಂಶ ಬಂದಾಗ ಮಧು ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಅವರು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ತೇರ್ಗಡೆಯಾಗಿದ್ದರು.
ಗುರಿ ಸಾಧನೆಗಾಗಿ ಮಧು ಅವರು ಹಗಲಿರುಳೆನ್ನದೆ ಶ್ರಮಿಸಿದ್ದರು. ಪೊಲೀಸ್ ಇಲಾಖೆಯ ಸಹಕಾರ ಪಡೆದು ಪರೀಕ್ಷೆಗೆ ತಯಾರಿಯನ್ನೂ ನಡೆಸಿದ್ದರು. ಮಿತ್ರರಿಂದ ಪುಸ್ತಕಗಳನ್ನು ಪಡೆದು ಅಧ್ಯಯನವನ್ನು ಕೂಡ ನಡೆಸಿದ್ದರು. ನಿರಂತರ ಪ್ರಯತ್ನ ಅವಿರತ ಶ್ರಮ ಇವರನ್ನು ಕೈಬಿಡಲಿಲ್ಲ. ಅತ್ಯುತ್ತಮ ಫಲಿತಾಂಶದೊಂದಿಗೆ ತೇರ್ಗಡೆಯಾಗಿದ್ದಾರೆ.
ಚಿನ್ನದ ಪದಕವನ್ನು ಭಾನುವಾರ ರಾಜ್ಯಪಾಲರಿಂದ ಮಧು ಮೈಸೂರಿನಲ್ಲಿ ಸ್ವೀಕರಿಸಿದರು. ಇದೀಗ ಪೊಲೀಸ್ ಇಲಾಖೆ ವತಿಯಿಂದ ಕಾನ್ಸ್ಟೇಬಲ್ ಮಧುಗೆ ಶುಭಾಶಯವನ್ನು ತಿಳಿಸಲಾಗಿದೆ. ವಿಶೇಷವಾಗಿ ಸುಳ್ಯ ಪೊಲೀಸ್ ಠಾಣೆಯ ಎಸ್ಐ ಈರಯ್ಯ ದೂಂತೂರು ಅವರು ಮಧು ಅವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಂದಿನ ಜೀವನಕ್ಕೆ ಶುಭ ಹಾರೈಸಿದ್ದಾರೆ.