ನ್ಯೂಸ್ ನಾಟೌಟ್ : ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಮಹಾಕುಂಭಮೇಳದ ಆಕರ್ಷಣೆಗಳಲ್ಲಿ ಒಂದಾಗಿದ್ದ ‘ಐಐಟಿ ಬಾಬಾ’ ಖ್ಯಾತಿಯ ಅಭಯ್ ಸಿಂಗ್ ರನ್ನು ಕುಂಭಮೇಳದಿಂದ ಹೊರ ಕಳುಹಿಸಲಾಗಿದೆ ಎನ್ನಲಾಗುತ್ತಿದೆ.
ಮಹಾಕು೦ಭ ಮೇಳ ಶುರುವಾದ ಮೊದಲ ದಿನದಿ೦ದಲೂ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಐಐಟಿ ಬಾಬಾ ಎಂದೇ ಖ್ಯಾತಿ ಪಡೆದಿದ್ದ ಅಭಯ್ ಸಿ೦ಗ್ ರನ್ನು ಇದೀಗ ಮಹಾಕುಂಭಮೇಳದಿಂದ ಹೊರಗೆ ಹಾಕಲಾಗಿದೆ ಎಂದು ತಿಳಿದುಬಂದಿದೆ.
ಇನ್ನು ಮನೆ ಮತ್ತು ಸಂಬಂಧಿಕರನ್ನು ತೊರೆದು ಸನ್ಯಾಸ್ಯತ್ವ ಸ್ವೀಕರಿಸಿರುವ ಅಭಯ್ ಸಿಂಗ್ ರನ್ನು ಅವರ ತಂದೆ ಮನೆಗೆ ಬರುವಂತೆ ಆಗ್ರಹಿಸಿದ್ದಾರೆ. ಈ ಕುರಿತು ಕೆಲ ಯೂಟ್ಯೂಬ್ ಚಾನಲ್ ಗಳು ಹಾಗೂ ಕೆಲ ಮಾಧ್ಯಮಗಳು ಅಭಯ್ ಸಿಂಗ್ ಗೆ ಮಾಹಿತಿ ನೀಡಿದಾಗ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಕು೦ಭ ಮೇಳದಲ್ಲಿ ಜನರಿಂದ ಹೆಚ್ಚಿನ ಪ್ರಶ೦ಸೆ ಮತ್ತು ಜನಪ್ರಿಯತೆ ಗಳಿಸಿದ ಐಐಟಿ ಬಾಬಾ, ನಿರಂತರ ಸಂದರ್ಶಕರ ಹಾವಳಿಯಿಂದ ತೀವ್ರ ಗೊಂದಲಕ್ಕೊಳಗಾಗಿದ್ದರು. ಮನೆಗೆ ಹಿಂತಿರುಗುವಂತೆ ಹೆತ್ತವರು ಕಣ್ಣೀರಿಟ್ಟಿದ್ದು ಹಾಗೂ ಇದೇ ವಿಚಾರವಾಗಿ ಕೆಲವು ಮಾಧ್ಯಮಗಳ ನಿರ೦ತರ ಪ್ರಶ್ನೆಗಳು ಅಭಯ್ ರ ಮನಸ್ಥಿತಿ, ನೆಮ್ಮದಿ ಹಾಳು ಮಾಡಿದೆ. ಇದರಿ೦ದ ಬೇಸತ್ತ ಅಭಯ್ ಸಿಂಗ್ ಡ್ರಗ್ಸ್ ಮೊರೆ ಕೂಡ ಹೋಗಿದ್ದಾರೆ ಎ೦ದು ಕೆಲವು ಆಶ್ರಮದ ಸಾಧುಗಳು ಹೇಳಿದ್ದಾರೆ.
ಇನ್ನು ನಾಪತ್ತೆ ವದಂತಿಗಳಿಗೆ ಪ್ರತಿಕ್ರಿಯೆ ನೀಡಿರುವ ಅಭಯ್ ಸಿಂಗ್, ‘ಇವೆಲ್ಲವೂ ಶುದ್ಧ ಸುಳ್ಳು. ನಾನಿನ್ನು ಮಹಾಕುಂಭ ಮೇಳದ ಭಾಗವಾಗಿದ್ದೇನೆ. ಅಷ್ಟಕ್ಕೂ ನನ್ನನ್ನು ಆಶ್ರಮದಿಂದ ಹೊರಟು ಹೋಗುವಂತೆ ಒತ್ತಾಯಿಸಿದರು. ಹಾಗಾಗಿ ಅಲ್ಲಿಂದ ಹೊರಬಂದೆ ಅಷ್ಟೇ. ಆಶ್ರಮದ ನಿರ್ವಾಹಕರು ರಾತ್ರಿಯಂದು ನನ್ನನ್ನು ಹೊರ ಹೋಗುವಂತೆ ಆದೇಶಿಸಿದರು. ನನಗೆ ಜನಪ್ರಿಯತೆ ಸಿಗುತ್ತಿರುವ ಹಿನ್ನಲೆ, ಅವರ ಬಗ್ಗೆಗಿನ ಯಾವುದಾದರೂ ವಿಷಯಗಳನ್ನು ನಾನು ಮಾಧ್ಯಮಗಳ ಮುಂದೆ ಬಹಿರಂಗಪಡಿಸಬಹುದು ಎಂಬುದು ಅವರ ಚಿಂತೆ. ಅದಕ್ಕೆ ಹೋಗಿ ಎ೦ದಿದ್ದಾರೆ” ಎಂದು ಐಐಟಿ ಬಾಬಾ ಅಭಯ್ ಸಿಂಗ್ ಹೇಳಿದ್ದಾರೆ.
Click