ನ್ಯೂಸ್ ನಾಟೌಟ್: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಪ್ರವಾಸಿಗರ ಮೇಲಿನ ಉಗ್ರರ ದಾಳಿಯಲ್ಲಿ ಮೃತಪಟ್ಟಿರುವ ತನ್ನ ಪತಿ ಶುಭಂ ದ್ವಿವೇದಿಗೆ ಹುತಾತ್ಮ ಸ್ಥಾನಮಾನ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಪತ್ನಿ ಆಶಾನ್ಯ ಮನವಿ ಮಾಡಿದ್ದಾರೆ.
ಕಾಶ್ಮೀರದ ಪಹಲ್ಗಾಮ್ ಪ್ರವಾಸ ಕೈಗೊಂಡಿದ್ದ ಉದ್ಯಮಿ ಶುಭಂ ದ್ವಿವೇದಿಯನ್ನು ಗುಂಡಿಕ್ಕಿ ಹತ್ಯೆ ಮಾಡುವ ಮೊದಲು ಧರ್ಮವನ್ನು ಕೇಳಿದ್ದರು.
‘ನನ್ನ ಪತಿ ಧೀರವಾಗಿ ಪ್ರಾಣ ತ್ಯಾಗ ಮಾಡಿದ್ದು, ಹಲವರ ಜೀವ ಉಳಿಸಲು ಕಾರಣರಾಗಿದ್ದಾರೆ. ಉಗ್ರರ ಮೊದಲ ಗುಂಡು ನನ್ನ ಪತಿಗೆ ತಗುಲಿತು. ಭಯೋತ್ಪಾದಕರು ಹಿಂದೂ ಅಥವಾ ಮುಸ್ಲಿಂ ಎಂದು ಕೇಳಲು ಸಮಯ ತೆಗೆದುಕೊಂಡರು. ಆ ವೇಳೆ ಅಲ್ಲಿಂದ ಹಲವರು ಓಡಿಹೋಗಿ ಪ್ರಾಣ ಉಳಿಸಿಕೊಳ್ಳಲು ಸಾಧ್ಯವಾಯಿತು’ ಎಂದು ಆಶಾನ್ಯ ಹೇಳಿದ್ದಾರೆ.
‘ನಮ್ಮ ಬಳಿ ಬಂದ ಜನರು (ಭಯೋತ್ಪಾದಕರು) ಹಿಂದೂ ಅಥವಾ ಮುಸ್ಲಿಮರೇ ಎಂದು ಕೇಳಿದರು. ಅವರು ತಮಾಷೆ ಮಾಡುತ್ತಿದ್ದರು ಎಂದು ಅಂದುಕೊಂಡಿದ್ದೆ. ನಾನು ನಗುತ್ತಾ ಏನು ಎಂದು ಕೇಳಿದೆ. ತಕ್ಷಣವೇ ಪ್ರಶ್ನೆಯನ್ನು ಪುನರಾವರ್ತಿಸಿದರು. ನಾವು ಹಿಂದೂಗಳು ಎಂದು ಉತ್ತರಿಸಿದಾಕ್ಷಣ ಗುಂಡು ಹೊಡೆಯಲಾಯಿತು. ಅಲ್ಲಿಗೆ ಎಲ್ಲವೂ ಮುಗಿದು ಹೋಗಿತ್ತು. ಶುಭಂ ಮುಖದಲ್ಲಿ ರಕ್ತ ಮಡುಗಟ್ಟಿತ್ತು. ಏನಾಯಿತು ಎಂದು ಅರಿವಾಗಲಿಲ್ಲ’ ಎಂದು ಶುಭಂ ದ್ವಿವೇದಿಯ ಪತ್ನಿ ಹೇಳಿದ್ದಾರೆ.
‘ಸರ್ಕಾರ ನನ್ನ ಪತಿಗೆ ಹುತಾತ್ಮ ಸ್ಥಾನಮಾನ ನೀಡಬೇಕು. ಅದನ್ನು ಬಿಟ್ಟರೆ ಬೇರೇನೂ ಬೇಡ. ನನ್ನ ಬೇಡಿಕೆ ಈಡೇರಿದರೆ ಬದುಕಲು ಕಾರಣ ಇರುತ್ತದೆ’ ಎಂದು ಹೇಳಿದ್ದಾರೆ.