ನ್ಯೂಸ್ ನಾಟೌಟ್: ರಾಜ್ಯದಲ್ಲಿ ಭಾರಿ ಸದ್ದು ಮಾಡುತ್ತಿರುವ ಹುಲಿ ಉಗುರು ಪ್ರಕರಣ ಈಗ ಸುಳ್ಯದಲ್ಲೂ ಗರ್ಜಿಸುವುದಕ್ಕೆ ಶುರುವಾಗಿದೆ. ಬಿಗ್ ಬಾಸ್ ಸೀಸನ್ – 10 ನಲ್ಲಿ ವರ್ತೂರು ಸಂತೋಷ್ ಅವರ ಕೊರಳಲ್ಲಿ ಹುಲಿ ಉಗುರಿನ ಪೆಂಡೆಂಟ್ ಇದ್ದುದರಿಂದ ಅವರನ್ನು ಅರಣ್ಯಾಧಿಕಾರಿಗಳು ಬಿಗ್ ಬಾಸ್ ಮನೆಯಿಂದಲೇ ಅರೆಸ್ಟ್ ಮಾಡಿ ಕರೆದುಕೊಂಡು ಹೋಗಿದ್ದರು. ನಂತರ ನಟ ಜಗ್ಗೇಶ್, ದರ್ಶನ್ ಅವರಿಗೂ ಹುಲಿ ಉಗುರಿನ ಬಿಸಿ ತಟ್ಟಿತ್ತು. ಈ ನಡುವೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ನಗರ ಪಂಚಾಯತ್ ಮಹಿಳಾ ಸಿಬ್ಬಂದಿ ಕೊರಳಿನಲ್ಲಿ ಹುಲಿ ಉಗುರಿನ ಪೆಂಡೆಂಟ್ ಇದೆ ಅನ್ನುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ತಾರೆಯರ ಕೊರಳಲ್ಲಿ ಹುಲಿ ಉಗುರು ಇರುವುದನ್ನು ನೋಡಿರುವ ಜನರು ನಗರ ಪಂಚಾಯತ್ ಮಹಿಳಾ ಸಿಬ್ಬಂದಿ ಕೊರಳಿನಲ್ಲೂ ಇದೆಯೇ ಎಂದು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ನ್ಯೂಸ್ ನಾಟೌಟ್ ಗೆ ಪ್ರತಿಕ್ರಿಯಿಸಿದ ನಗರ ಪಂಚಾಯತ್ ಮಾಜಿ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ ಹೇಳಿದ್ದು ಹೀಗೆ, “ನನ್ನ ಗಮನಕ್ಕೆ ಈ ವಿಚಾರ ಬಂದಿಲ್ಲ. ಈಗ ತಾನೆ ಫೋಟೋವೊಂದು ನನ್ನ ಮೊಬೈಲ್ ಗೂ ವಾಟ್ಸಾಪ್ ಮೂಲಕ ಬಂತು. ಇದನ್ನು ನಾನು ಗಮನಿಸಿದ್ದೇನೆ, ಇದರ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದೇನೆ. ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಅರಣ್ಯಾಧಿಕಾರಿಗಳು ಇದನ್ನು ತನಿಖೆ ಮಾಡಲಿದ್ದಾರೆ ಎಂದು ತಿಳಿಸಿದರು.