ನ್ಯೂಸ್ ನಾಟೌಟ್: ಕೆಲಸ ಕೇಳಿಕೊಂಡು ಬಂದಾತ ಮೊಬೈಲ್, ಬೈಕ್ ಕಳವು ಮಾಡಿ ಪರಾರಿಯಾಗಿರುವ ಬಗ್ಗೆ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಬರಾಯದ ರಿಯಾಜ್ ಸುಳ್ಯ ಠಾಣೆಗೆ ದೂರು ನೀಡಿದ್ದು, ರಿಯಾಜ್ ಅರಂತೋಡಿನ ಹೊಟೇಲ್‌ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು ಎನ್ನಲಾಗಿದೆ.
ಅವರಲ್ಲಿಗೆ ಅವರ ಪರಿಚಯದ ಹರ್ಷಿಕೇಶ್ ಕೆಲಸ ಕೇಳಿದ್ದು, ಅದರಂತೆ ಆತನನ್ನು ರಿಯಾಜ್ ಹೊಟೇಲ್‌ಗೆ ಕರೆದುಕೊಂಡು ಹೋಗಿದ್ದು, ಮಧ್ಯಾಹ್ನ ರಿಯಾಜ್ ವಿಶ್ರಾಂತಿ ಪಡೆದು ಎದ್ದು ನೋಡಿದಾಗ ಹರ್ಷಿಕೇಶ್ ರೂಂನಲ್ಲಿ ಕಾಣಿಸದೇ ಇದ್ದು, ಜತೆಗೆ ರಿಯಾಜ್ ಮೊಬೈಲ್(14 ಸಾವಿರ ರೂ. ಮೌಲ್ಯ) ಹಾಗೂ ಮೋಟಾರ್ ಸೈಕಲ್ (60 ಸಾವಿರ ರೂ. ಮೌಲ್ಯ) ಕಳವು ಮಾಡಿಕೊಂಡು ಹೋಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಸುಳ್ಯ ಠಾಣೆಗೆ ದೂರು ನೀಡಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.