ಕೆವಿಜಿ ಕ್ಯಾಂಪಸ್‌ಮಂಗಳೂರುಸಾಧಕರ ವೇದಿಕೆ

ಕುರುಂಜಿಯವರನ್ನು ನೆನೆದು…

ನ್ಯೂಸ್ ನಾಟೌಟ್ : ಅವರು ಓದಿದ್ದು ಎಂಟನೆಯ ತರಗತಿಯವರೆಗೆ ಮಾತ್ರ. ಬೆಳೆದದ್ದು 33 ಎಕರೆ ತೋಟದಲ್ಲಿ 250 ಖಂಡಿ ಅಡಿಕೆ. ಸ್ಥಾಪಿಸಿದ್ದು ಮೆಡಿಕಲ್, ಡೆಂಟಲ್, ಲಾ, ಎನ್‌ಎಂಸಿ, ಆಯುರ್ವೇದ, ಇಂಜಿನಿಯರಿಂಗ್, ಪಾಲಿಟೆಕ್ನಿಕ್, ಐಟಿಐ – ಕಾಲೇಜು. ಅವರದು ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್. “ನೀವು 35% ತೆಗೆದು ಪಾಸಾದವರನ್ನು ಕಾಲೇಜು ಸೇರಿಸಿಕೊಂಡು ಡಿಸ್ಟಿಂಕ್ಷನ್ ಪಡಿಬೇಕು. ಅದು ಅಕಾಡೆಮಿ ಆಪ್ ಲಿಬರಲ್ ಎಜುಕೇಶನ್ನಿನ ಉದ್ದೇಶ” ಎಂದು ಹೇಳುತ್ತಿದ್ದರು. ಅವರೇ ಈಗ ಬದುಕಿರುತ್ತಿದ್ದರೆ 96 ತುಂಬುತ್ತಿದ್ದ ಡಾ|| ಕುರುಂಜಿ ವೆಂಕಟ್ರಮಣ ಗೌಡರು.

ಒಂದು ಕಾಲದಲ್ಲಿ ಸುಳ್ಯ ಮಲೆನಾಡ ಮಲೇರಿಯಾದ ಕೊಂಪೆ. ಇಲ್ಲಿಗೆ ಅಧಿಕಾರಿಗಳು ಬಂದರೆಂದರೆ ಅದು ಪನಿಶ್ ಮೆಂಟ್ ಟ್ರಾನ್ಸ್ಫರ್. ಅಂಥ ಹೊದ್ದು ಮಲಗಿದ ಊರಿನಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದವರು ಡಾ|| ಕುರುಂಜಿ. ಕರ್ನಾಟಕದಲ್ಲಿ ಮೆಡಿಕಲ್ ಕಾಲೇಜು ಇಲ್ಲದ ಕೆಲವು ಜಿಲ್ಲೆಗಳಿವೆ. ಅಂಥದ್ದರಲ್ಲಿ ಸುಳ್ಯವೆಂಬ ತಾಲೂಕು ಕೇಂದ್ರಕ್ಕೊಂದು ಮೆಡಿಕಲ್ ಕಾಲೇಜು ತರಿಸಿದ್ದು ಅವರ ಮಹೋನ್ನತ ಸಾಧನೆ.

ಅವರಲ್ಲೊಂದು ಬದ್ಧತೆ ಇತ್ತು. ಸಮಾಜದ ಕಟ್ಟ ಕಡೆಯವನಿಗೂ ಶಿಕ್ಷಣ ಒದಗಿಸುವುದು. ಅವರಲ್ಲೊಂದು ಸಮನ್ವಯ ಭಾವವಿತ್ತು. ವೈದಿಕ-ಅವೈದಿಕ, ಆಂಗ್ಲ-ಕನ್ನಡ, ಹಿಂದೂ-ಮುಸಲ್ಮಾನ, ಸಾಮಾನ್ಯ-ತಾಂತ್ರಿಕ, ಸಾರ್ವತ್ರಿಕ- ವೈದ್ಯಕೀಯ, ಗೌಡ- ಗೌಡೇತರ ಸಮನ್ವಯ ಭಾವ. ಅವರು ಪ್ರತಿಭೆಗೆ ಬೆಲೆ ಕೊಡುತ್ತಿದ್ದರು. ಒಟ್ಟಿಗೇ ಸಾಮಾಜಿಕ ನ್ಯಾಯಕ್ಕೆ ಬದ್ಧರಾಗಿರುತ್ತಿದ್ದರು. ಇಷ್ಟೊಂದು ವಿದ್ಯಾ ಸಂಸ್ಥೆಗಳನ್ನು ನಡೆಸಿದ ಅವರ ಮೇಲೆ ಒಂದೇ ಒಂದು ಆಪಾದನೆ ಇಲ್ಲ. ಅವರ ವಿರುದ್ಧ ಒಂದೇ ಒಂದು ಪ್ರಕರಣ ದಾಖಲಾಗಿಲ್ಲವೆಂಬುದೇ ಅವರ ಪಾರದರ್ಶಕತೆಗೆ ಸಾಕ್ಷಿ.

ಅವರಲ್ಲೊಂದು ಸಾಮಾಜಿಕ ಕಳಕಳಿಯಿತ್ತು. ಅವರು ಹತ್ತಾರು ಕಲ್ಯಾಣ ಮಂಟಪಗಳನ್ನು ಕಟ್ಟಿದ್ದು ಬಡವರೂ ಕಡಿಮೆ ಖರ್ಚಲ್ಲಿ ಮದುವೆ ಮಾಡಿಸಲಿ ಎಂದು. ಅವರು ತಮ್ಮಲ್ಲಿದ್ದ 75ರಷ್ಟು ಕವಾಟು ಪುಸ್ತಕಗಳನ್ನು (ಇಂಗ್ಲಿಷ್‌ ಪುಸ್ತಕಗಳೊಡನೆ) ಶಾಲೆಗಳಿಗೆ ದಾನವಾಗಿ ನೀಡಿದ್ದಾರೆ. ನಮ್ಮ ಹಳ್ಳಿಯ ಮಕ್ಕಳು ಆಂಗ್ಲಭಾಷೆಯಲ್ಲಿ ನಿಪುಣರಾಗಲಿ ಎಂದು. ಅವರು ವಿದ್ಯಾ ಸಂಸ್ಥೆಗಳನ್ನು ತೆರೆದುದರ ಹಿಂದೆ ನಿರುದ್ಯೋಗ ಅಷ್ಟರ ಮಟ್ಟಿಗೆ ನಿವಾರಣೆಯಾಗಲಿ, ಎಂದು.

ಅವರು ಕುಟುಂಬಕ್ಕೆರಡೇ ಮಕ್ಕಳು ಎಂಬ ಕುಟುಂಬ ಯೋಜನೆಯನ್ನು ಎತ್ತಿ ಹಿಡಿದವರು. ಅದ್‌ರದೆ ಉದಿರಿಕ್ಕಿಲ್ಲೆ ಅಥವಾ ಕೈ ಕೆಸರಾದರೆ ಮಾತ್ರ ಬಾಯಿ ಮೊಸರು ಎಂಬ ದುಡಿಮೆಯ ಸಂಸ್ಕೃತಿಯ ಹರಿಕಾರರು ಅವರು.

ಅವರ ಕ್ಷಮಾಗುಣದ ಬಗ್ಗೆ ಒಂದು ದೃಷ್ಟಾಂತ. ಎನ್‌ಎಂಸಿಯಲ್ಲಿ ಡಾ.ಚಂದ್ರಶೇಖರ ದಾಮ್ಲೆಯವರ ನೇತೃತ್ವದಲ್ಲಿ ನಾವು ಉತ್ತರ ಗೋಗ್ರಹಣ ಯಕ್ಷಗಾನ ಪ್ರದರ್ಶಿಸಿದೆವು. ಬೃಹನ್ನಳೆಯಾಗಿ ನಾನು ಕನಿಷ್ಠ ವೇಷ ಭೂಷಣದಲ್ಲಿ ರಂಗ ಪ್ರವೇಶ ಮಾಡಿದಾಗ ಭಾಗವತರು “ಇದೇನು ಇಷ್ಟು ಕನಿಷ್ಠ ವೇಷ ಭೂಷಣ” ಎಂದು ಮಾತಾಡಿಸಿದರು. ನಾನಾಗ ಹಾಸ್ಯಕ್ಕಾಗಿ “ನಮ್ಮ ಧನಿಗಳು ದೊಡ್ಡ ನೃತ್ಯ ಶಾಲೆ ಕಟ್ಟಿಸಿ ಹಾಕಿದ್ದಾರೆ. ಆದರೆ ನನಗೆ ನೀಡುವ ಸಂಬಳ ಕಡಿಮೆ” ಎಂದುಬಿಟ್ಟೆ. ತಕ್ಷಣ ಪತ್ನಿ ಜಾನಕಮ್ಮನವರೊಡನೆ ಡಾ|| ಕುರುಂಜಿಯವರು ಮನೆಗೆ ತೆರಳಿದರು. “ನಾನಿನ್ನು ಕ್ಯಾಂಪಸ್ಸಿಗೆ ಕಾಲಿಡುವುದಿಲ್ಲ.” ಎಂಬ ಸಂದೇಶ ರವಾನಿಸಿದರು.

ನನ್ನದು ನಿಜಕ್ಕೂ ಅಧಿಕ ಪ್ರಸಂಗವಾಗಿತ್ತು. ಮರುದಿನ ಡಾ|| ಕುರುಂಜಿಯವರ ಮನೆಗೆ ಧಾವಿಸಿ “ಕ್ಷಮಿಸಿ. ಅದು ಪ್ರತ್ಯುತ್ಪನ್ನ ಮತಿತ್ವದಿಂದ ಬಂದ ಉತ್ತರವೇ ಹೊರತು ನಿಮ್ಮನ್ನು ನೋಯಿಸಲೆಂದು ಆಡಿದ್ದಲ್ಲ. ನೀವು ಕಟ್ಟಿಸಿದ ಕ್ಯಾಂಪಸ್ಸಿಗೆ ನೀವು ಬಾರದಿದ್ದರೆ ಎನ್‌ಎಂಸಿ ಅನಾಥವಾಗುತ್ತದೆ,” ಎಂದು ಪ್ರಾಮಾಣಿಕವಾಗಿ ಹೇಳಿದೆ. ನನ್ನ ಭಾವ ಅರ್ಥವಾಗಿ ಡಾ|| ಕುರುಂಜಿಯವರು “ನಿಮಗೆ ಯಕ್ಷಗಾನದಲ್ಲಿ ಒಳ್ಳೆಯ ಭವಿಷ್ಯವಿದೆ. ಆದರೆ ವೇದಿಕೆ ಮೇಲಿನಿಂದ ಯಾರನ್ನೂ ನೋಯಿಸಬೇಡಿ” ಎಂದು ಕೈ ಮುಂದೆ ಚಾಚಿದರು.

ನಾನು ಆ ಕೈ ಹಿಡಿದು ಕಣ್ಣಿಗೊತ್ತಿಕೊಂಡೆ. ಮರು ದಿವಸದಿಂದ ಡಾ|| ಕುರುಂಜಿಯವರು ಯಥಾ ಪ್ರಕಾರ ಕ್ಯಾಂಪಸ್ಸಿಗೆ ಬಂದರು. ಇಂತಹ ಕೆಲವು ಹೃದ್ಯ ಪ್ರಸಂಗಗಳನ್ನು ನಾನು ಬರೆದ, ಡಾ| ಲೀಲಾಧರ್ ಪ್ರಕಟಿಸಿದ “ಇರುಳು ಕಳೆದ ಬೆಳಕು” ಕೃತಿಯಲ್ಲಿ ನೀವು ಓದಬಹುದು.

ಅವರು ಸುಳ್ಯದ ಬಹುಮತೀಯ ಸಮುದಾಯಕ್ಕೆ ಸೇರಿದವರು. ಆದರೂ ಅದರ ಪ್ರಯೋಜನ ಪಡೆಯಲಿಲ್ಲ. ಕೆಲವು ಮಹಾರ್ಥಿಶರಿಗೆ ಹತ್ತಿರವಾದರೂ ಅವರ ಕೃಪೆಗಾಗಿ ಕೈ ಬಿಡಲಿಲ್ಲ. ಅವರಿಗೆ ಭಾರತದ ಯಾವ ವಿಶ್ವವಿದ್ಯಾಲಯವೂ ಗೌರವ ಡಾಕ್ಟರೇಟ್ ನೀಡಲಿಲ್ಲ. ಹೋಗಲಿ ಅಂದರೆ ಕೇಂದ್ರ ಸರಕಾರ ಪದ್ಮವಿಭೂಷಣ ನೀಡಲಿಲ್ಲ.

ಕುರುಂಜಿ ಸುಳ್ಯ ಹಬ್ಬ ಆರಂಭವಾದ ವರ್ಷ ಅಭಿನಂದನಾ ಭಾಷಣ ಮಾಡಿದ ಸೌಭಾಗ್ಯ ನನ್ನದು. ಆಗ ಡಾ|| ಕುರುಂಜಿ ಮತ್ತು ಜಾನಕಮ್ಮ ಇಬ್ಬರೂ ಬದುಕಿದ್ದರು. ಇದೀಗ ಡಾ|| ಕುರುಂಜಿ ವಿಧಿವಶರಾಗಿ ಹನ್ನೆರಡು ವರ್ಷಗಳಾದವು. ಅವರಿಂದ ನಿರ್ವಾತವಾದ ಪ್ರದೇಶ ಇನ್ನೂ ತುಂಬಿಲ್ಲ.

Related posts

ಮಂಗಳೂರು: ಕುಡಿದು ಆರೇಳು ಅಡಿ ಆಳವಿದ್ದ ಮೋರಿಗೆ ಬಿದ್ದ ವ್ಯಕ್ತಿ..! ಸಂಚಾರಿ ಪೊಲೀಸರಿಂದ ರಕ್ಷಣೆ..!

ಕಾಸರಗೋಡಿನಿಂದ ಮಂಗಳೂರಿಗೆ ಬರುತ್ತಿದ್ದ ಆ್ಯಂಬುಲೆನ್ಸ್ ಮತ್ತು ಕಾರು ಮಧ್ಯೆ ಭೀಕರ ಅಪಘಾತ..! 3 ರ ದುರಂತ ಅಂತ್ಯ..!

ಮಂಗಳೂರು: ಹಳೆಯ ಹೆಲ್ಮೆಟ್‌ ಇಟ್ಟು ಹೊಸ ಹೆಲ್ಮೆಟ್‌ ಕದ್ದ ಕಳ್ಳ..! ನಗರದ ಹಲವೆಡೆ ಹೆಚ್ಚುತ್ತಿರುವ ಹೆಲ್ಮೆಟ್‌ ಕಳ್ಳತನ..!