ನ್ಯೂಸ್ ನಾಟೌಟ್: ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿ ಹದಿನಾರು ವರ್ಷದ ಬಾಲಕಿಯ ತಲೆಯನ್ನು ಕಡಿದು ರುಂಡ ಸಮೇತ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕೊಡಗಿನ ಜನತೆ ಬೆಚ್ಚಿ ಬಿದ್ದಿದ್ದ ಈ ಪ್ರಕರಣ ಸೋಮವಾರ ಪೇಟೆಯಲ್ಲಿ ನಡೆದಿತ್ತು. ಭೀಕರ ಹತ್ಯೆಯಲ್ಲಿ ಆರೋಪಿ ಪ್ರಕಾಶ್ (೩೩ ವರ್ಷ) ಹುಡುಗಿಯನ್ನು ಕೊಂದ ಬಳಿಕ ಆಕೆಯ ತಲೆಯನ್ನು ಕಡಿದು ತೆಗೆದುಕೊಂಡು ಹೋಗಿದ್ದ. ದಟ್ಟವಾದ ಕಾಡಿನಲ್ಲಿ ಅವಿತು ಕುಳಿತುಕೊಂಡಿದ್ದ, ಕೂಡಲೇ ಆತನನ್ನು ಬಂಧಿಸಲಾಯಿತು. ಆದರೆ ಇದುವರೆಗೆ ರುಂಡ ಎಲ್ಲಿದೆ ಅನ್ನುವ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಹೇಳಿದ್ದಾರೆ. ಇದೀಗ ಪೊಲೀಸರು ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ರುಂಡವನ್ನು ಇಂದು ಸಂಜೆಯೊಳಗೆ ಪತ್ತೆ ಹಚ್ಚುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.