ನ್ಯೂಸ್ ನಾಟೌಟ್: ಟಿಪ್ಪು ಜಯಂತಿಯನ್ನು ಆಚರಿಸೋಕೆ ಕಾಂಗ್ರೆಸ್ ಸರ್ಕಾರಕ್ಕೆ ಹಣವಿದೆ. ಆದರೆ ದಸರಾ ಆಚರಿಸುವುದಕ್ಕೆ ಸಿದ್ದರಾಮಯ್ಯ ಸರ್ಕಾರದಲ್ಲಿ ಹಣ ಯಾಕಿಲ್ಲ ಎಂದು ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ.
ರಾಜ್ಯದಲ್ಲಿ ಬರ ಪರಿಸ್ಥಿತಿ ಇರುವುದರಿಂದ ಈ ಬಾರಿ ನಾಡಹಬ್ಬ ದಸರಾವನ್ನು ಸರಳವಾಗಿ ಆಚರಿಸುವುದಾಗಿ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿಕೆ ನೀಡಿದ್ದಾರೆ. ಈ ಬೆನ್ನಲ್ಲೇ ಸಾಮಾಜಿಕ ಮಾಧ್ಯಮ ‘ಎಕ್ಸ್’ ನಲ್ಲಿ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದೆ.
ಬಿಟ್ಟಿ ಶೋಕಿಗಳಿಗೆ ಕೋಟಿ ಕೋಟಿ ಖರ್ಚು ಮಾಡುವ ಸಿದ್ದರಾಮಯ್ಯ ಅವರ ಸರ್ಕಾರ ಇದೀಗ ಮೈಸೂರು ದಸರಾ ಆಚರಣೆಯನ್ನು ಮಾತ್ರ ಸರಳವಾಗಿ ಆಚರಣೆ ಮಾಡಲು ಮುಂದಾಗಿದೆ. ರಾಜೀವ್ ಗಾಂಧಿ ಪ್ರತಿಮೆ ಮಾಡುವುದಕ್ಕೆ, ‘ಇಂಡಿಯಾ’ ಮೈತ್ರಿಕೂಟದ ಸಭೆ ಮಾಡುವುದಕ್ಕೆ, ಅಲ್ಪಸಂಖ್ಯಾತರು, ಮಿಷನರಿಗಳ ಉದ್ಧಾರಕ್ಕಾಗಿ ಕಾಂಗ್ರೆಸ್ ಸರ್ಕಾರದ ಬಳಿ ಕೋಟಿ ಕೋಟಿ ಹಣವಿದೆ. ಆದರೆ ನಾಡಹಬ್ಬ ದಸರಾ ಆಚರಿಸಲು, ಕನ್ನಡ ವಿ.ವಿ.ಗಳಿಗೆ ಅನುದಾನ ಕೊಡಲು, ಹಂಪಿ ಉತ್ಸವ ಆಚರಿಸಲು ಮಾತ್ರ ಸರ್ಕಾರಕ್ಕೆ ಬರ, ಅನುದಾನದ ಕೊರತೆ ಅಡ್ಡ ಬರುತ್ತದೆ’ ಎಂದು ಬಿಜೆಪಿ ಟೀಕಾಪ್ರಹಾರ ನಡೆಸಿದೆ. ‘ಈ ಹಿಂದೆಯೂ ಸಿದ್ದರಾಮಯ್ಯ ಅವರು ದಸರಾ ಆಚರಣೆಗೆ ಹಣವಿಲ್ಲವೆಂದು ಹೇಳಿ, ಅದ್ಧೂರಿಯಾಗಿ ರಾಜ್ಯದ ತುಂಬಾ ಟಿಪ್ಪು ಜಯಂತಿಯನ್ನು ಆಚರಿಸಿದ್ದರು. ಮೈಸೂರು ದಸರಾ ಅಂದರೆ ಈ ಸರ್ಕಾರ ಮೂಗು ಮುರಿಯುವುದೇಕೆ’ ಎಂದು ಬಿಜೆಪಿ ಪ್ರಶ್ನಿಸಿದೆ.