ಕೊಡಗುವೈರಲ್ ನ್ಯೂಸ್

‘ನಮ್ಮೂರ ಶಾಲೆ ಉಳಿಸೋಣ-ಮಿಷನ್ 2.0’ ಅಭಿಯಾನಕ್ಕೆ ಸಂಪಾಜೆಯಲ್ಲಿ ಅದ್ದೂರಿ ಚಾಲನೆ, ಒಂದು ದೇವಸ್ಥಾನ ಉಳಿಸೋಕೆ ನಾವೆಲ್ಲ ಶ್ರಮಿಸುತ್ತೇವೆ, ಹಾಗೆಯೇ ನಾವೆಲ್ಲ ಸೇರಿ ಒಂದು ವಿದ್ಯಾದೇಗುಲ ಉಳಿಸೋಣ ಬನ್ನಿ

ನ್ಯೂಸ್ ನಾಟೌಟ್: ‘ನಮ್ಮೂರ ಶಾಲೆ ಉಳಿಸೋಣ- ಮಿಷನ್ 2.0’ ಅಭಿಯಾನಕ್ಕೆ ಸಂಪಾಜೆಯಲ್ಲಿ ಶನಿವಾರ ಚಾಲನೆ ದೊರಕಿದೆ.
ನಾವೆಲ್ಲರೂ ಕೂಡ ನಮ್ಮ ಊರಿನ ಒಂದು ದೇವಸ್ಥಾನ ಉಳಿಸೋಕೆ ಶಕ್ತಿ ಮೀರಿ ಹಣ ನೀಡಿದ್ದೇವೆ. ಹಾಗೆಯೇ ಬಡ ಮಕ್ಕಳು ಕಲಿಯುತ್ತಿರುವ ಒಂದು ವಿದ್ಯಾದೇಗುಲ ಉಳಿಸಲು ಇಡಿ ಊರೇ ಇದೀಗ ಟೊಂಕ ಕಟ್ಟಿ ನಿಲ್ಲಬೇಕಾದಂಥಹ ಅನಿವಾರ್ಯತೆ ಎದುರಾಗಿದೆ. ತಾವೆಲ್ಲರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಈ ಅಭಿಯಾನಕ್ಕೆ ಕೈ ಜೋಡಿಸಿ ಒಂದು ವರ್ಷದ ಅವಧಿಯ ಈ ಧನ ಸಂಗ್ರಹದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಂಪಾಜೆ ಎಜ್ಯುಕೇಶನ್ ಸೊಸೈಟಿಯ ಸಂಚಾಲಕ ಎಂ. ಶಂಕರನಾರಾಯಣ ಭಟ್ ತಿಳಿಸಿದ್ದಾರೆ.

ಶನಿವಾರ (ಜ.4) ನಡೆದ ಕಾರ್ಯಕ್ರಮದಲ್ಲಿ ಅವರು ಶಾಲೆಯ ಸಂಕಷ್ಟದ ದಿನಗಳ ಕುರಿತು ಭಾವನಾತ್ಮಕ ಭಾಷಣದಲ್ಲಿ ಈ ವಿಚಾರವನ್ನು ತಿಳಿಸಿದರು. ಈ ಹಿನ್ನೆಲೆಯಲ್ಲಿ 2 ಕೋಟಿ ರೂ. ಸಂಗ್ರಹದ ಗುರಿಯನ್ನು ಇರಿಸಿಕೊಳ್ಳಲಾಗಿದೆ. ಇದೀಗ ಈ ಅಭಿಯಾನಕ್ಕೆ ಊರಿನ ಕೊಡುಗೈ ದಾನಿಯಾಗಿರುವ ಸುಮನಾ ಶ್ಯಾಮ್ ಭಟ್ ಅವರು 1 ಲಕ್ಷ ರೂ. ನೀಡಿದ್ದಾರೆ. ಅಂತೆಯೇ ಸಂಪಾಜೆ ಎಜ್ಯುಕೇಶನ್ ಸೊಸೈಟಿಯ ಉಪಾಧ್ಯಕ್ಷ ಯು ಬಿ ಚಕ್ರಪಾಣಿ 1 ಲಕ್ಷದ 3 ಸಾವಿರ ರೂ. ಹಣವನ್ನು ನೀಡಿದ್ದಾರೆ. ಅಲ್ಲದೆ ಆಡಳಿತ ಮಂಡಳಿಯ ಸದಸ್ಯರು, ಹಿರಿಯ ವಿದ್ಯಾರ್ಥಿಗಳ ತಂಡ ತಮ್ಮ ಕೈಲಾದ ಧನ ಸಹಾಯವನ್ನು ಮಾಡಿದ್ದಾರೆ.

ಸುಮಾರು 58 ವರ್ಷಗಳ ಹಿಂದೆ ಹಿರಿಯರು ಊರಿನ ಮಕ್ಕಳಿಗಾಗಿ ಕಲಿಯಲು ಮಾಡಿಕೊಟ್ಟ ಈ ದೊಡ್ಡ ಸಂಸ್ಥೆಯಲ್ಲಿ ಇದೀಗ ಹೈಸ್ಕೂಲ್ ಮತ್ತು ಪಿಯು ವಿಭಾಗವಿದೆ. ಆದರೆ ಅನುದಾನಿತ ಶಾಲೆ ಆಗಿರುವುದರಿಂದ ಇಲ್ಲಿಗೆ ಅಧ್ಯಾಪಕರ ನಿವೃತ್ತಿಯ ಬಳಿಕ ಸರ್ಕಾರ ಅನುದಾನ ನೀಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅತಿಥಿ ಶಿಕ್ಷಕರಿಗೆ ವೇತನ ನೀಡುವುದಕ್ಕೆ ಆಡಳಿತ ಮಂಡಳಿ ಪರದಾಟ ನಡೆಸುವಂತಹ ಸ್ಥಿತಿ ನಿರ್ಮಾಣಗೊಂಡಿದೆ. ಈ ಹಿನ್ನೆಲೆಯಲ್ಲಿ ನಾಳೆಯ ದಿನ ಹಲವಾರು ಪ್ರತಿಭೆಗಳನ್ನು ರೂಪಿಸಿ ದೇಶಕ್ಕೆ ಕೊಡುಗೆಯಾಗಿ ನೀಡಿದ ಈ ವಿದ್ಯಾ ದೇಗುಲ ಸಂಪೂರ್ಣವಾಗಿ ಬಾಗಿಲು ಮುಚ್ಚಿಕೊಳ್ಳಬಹುದು. ಅಂಥಹದ್ದೊಂದು ಸನ್ನಿವೇಶಕ್ಕೆ ಊರಿನವರಾದ ನಾವೆಲ್ಲರು ಅವಕಾಶ ಕೊಡುವುದು ಬೇಡ, ಹನಿಹನಿ ಕೂಡಿದರೆ ಸಾಗರ ಅನ್ನುವ ಹಾಗೆ ನಾವೆಲ್ಲರು ಜೊತೆಯಾಗಿ ನಿಂತು ಈ ಶಿಕ್ಷಣ ಸಂಸ್ಥೆಯನ್ನು ಉಳಿಸಿಕೊಳ್ಳಬೇಕಿದೆ.

ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಕೊಯನಾಡು ಶ್ರೀ ಗಣಪತಿ ದೇವಸ್ಥಾನ ಹಾಗೂ ಸಂಪಾಜೆಯ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆಯನ್ನು ಸಲ್ಲಿಸಿ ಸಂಸ್ಥೆಯ ಹಿರಿಯ ವಿದ್ಯಾರ್ಥಿ, ಪ್ರಸ್ತುತ ನ್ಯೂಸ್ ನಾಟೌಟ್ ಸಂಸ್ಥೆಯ ಪ್ರಧಾನ ಸಂಪಾದಕರು ಹಾಗೂ ಮುಖ್ಯಸ್ಥರಾಗಿರುವ ಹೇಮಂತ್ ಸಂಪಾಜೆಯವರಿಗೆ ನೇತೃತ್ವವನ್ನು ನೀಡಲಾಗಿದೆ. ಹೇಮಂತ್ ಸಂಪಾಜೆಯವರ ಜೊತೆ ಹಲವಾರು ಹಿರಿಯ ವಿದ್ಯಾರ್ಥಿಗಳು, ಶಿಕ್ಷಣ ಪ್ರೇಮಿಗಳು, ಊರಿನವರು, ಪರವೂರಿನವರು ಈ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಅಭಿಯಾನದಲ್ಲಿ ಕೈ ಜೋಡಿಸುವವರಿಗೆ ಮುಕ್ತ ಅವಕಾಶವಿದೆ.

Related posts

ಟ್ರಾಫಿಕ್ ಜಾಮ್‌ನಲ್ಲೇ ಊಟ ಮುಗಿಸಿದ ಬಿಎಂಟಿಸಿ ಬಸ್ ಚಾಲಕ..! ವಿಡಿಯೋ ವೈರಲ್

ಕಾಪಿರೈಟ್ ಪ್ರಕರಣದಲ್ಲಿ ಲೇಡಿ ಸೂಪರ್ ಸ್ಟಾರ್ ಗೆ ಹಿನ್ನಡೆ..! ನಟ ಧನುಷ್ ಮತ್ತು ನಟಿ ನಯನತಾರಾ ನಡುವಿನ ಹಗ್ಗಜಗ್ಗಾಟಕ್ಕೆ ಮದ್ರಾಸ್ ಹೈಕೋರ್ಟ್ ನಿಂದ ಪೂರ್ಣವಿರಾಮ..!

ಕೋಚಿಂಗ್ ಸೆಂಟರ್ ಗೆ ನೀರು ನುಗ್ಗಿ 3 ವಿದ್ಯಾರ್ಥಿಗಳ ಸಾವು ಪ್ರಕರಣಕ್ಕೆ ಟ್ವಿಸ್ಟ್..! 13 ಅಕ್ರಮ ಕೋಚಿಂಗ್ ಸೆಂಟರ್‌ ಗಳಿಗೆ ಬೀಗ..!