ಕರಾವಳಿ

ಕರಾವಳಿಯ ಅಲ್ಲಲ್ಲಿ ಮಳೆ ಸಿಂಚನ,ಸುಬ್ರಹ್ಮಣ್ಯದಲ್ಲಿ ಮಳೆ,ಹವಾಮಾನ ಇಲಾಖೆಯಿಂದ “ಎಲ್ಲೋ ಅಲರ್ಟ್” ಘೋಷಣೆ

ನ್ಯೂಸ್ ನಾಟೌಟ್: ಕಳೆದ ಕೆಲವು ದಿನಗಳಿಂದ ಕೆಂಡದಂತೆ ಹೊತ್ತಿ ಉರಿಯುತ್ತಿದ್ದ ಸೂರ್ಯನ ಶಾಖಕ್ಕೆ ಕರಾವಳಿ ಭಾಗದ ಜನರು ತತ್ತರಿಸಿ ಹೋಗಿದ್ದಾರೆ. ಅಷ್ಟೇ ಅಲ್ಲದೇ ಅಲ್ಲಲ್ಲಿ ಕಾಡುಕಿಚ್ಚುಗಳು ಹಬ್ಬುತ್ತಿದ್ದು, ಭಾರಿ ನಷ್ಟ ಸಂಭವಿಸಿದೆ. ಆದರೆ ಇದೀಗ ವಾತಾವರಣದಲ್ಲಿ ತುಸು ಬದಲಾವಣೆ ಕಂಡು ಬಂದಿದ್ದು,ಕೆಲವೆಡೆ ಮಳೆಯಾದ ಸುದ್ದಿ ಕೇಳಿ ಬರುತ್ತಿದೆ.

ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ನಿನ್ನೆ ಸಂಜೆ ವೇಳೆ ಮಳೆಯಾಯಿತು. ಮಂಗಳವಾರವೂ ಮಳೆ ಬಂದಿದ್ದು,ನಿನ್ನೆಯ ಮಳೆ ಅಲ್ಪ ಬಿರುಸು ಪಡೆದಿತ್ತು.ಸುಮಾರು ಅರ್ಧ ಗಂಟೆಗೂ ಅಧಿಕ ಸಮಯ ಮಳೆಯಾಗಿದ್ದು,ಇಳೆ ತಂಪಾಯಿತು. ಕುಕ್ಕೆ ಸುಬ್ರಹ್ಮಣ್ಯ, ಐನೆಕಿದು, ಹರಿಹರ ಪಲ್ಲತ್ತಡ್ಕ, ಕೊಲ್ಲಮೊಗ್ರು, ಕಲ್ಮಕಾರು, ಬಳ್ಪ ಸೇರಿದಂತೆ ಪರಿಸರದ ಅಲ್ಲಲ್ಲಿ ಸಾಧಾರಣ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲ ದಿನಗಳ ಹಿಂದೆ ಗರಿಷ್ಠ ತಾಪಮಾನ ದಾಖಲಾಗಿತ್ತು ಈ ಹಿನ್ನಲೆ ಭೂಮಿ ಕಾದ ಕೆಂಡದಂತಾಗಿತ್ತು.

ಇನ್ನು ಮಂಗಳವಾರದ ದಿನ ಮಡಿಕೇರಿ ಸುತ್ತಮುತ್ತ ಮಳೆ ಸುರಿದಿರುವ ಬಗ್ಗೆ ವರದಿಯಾಗಿತ್ತು. ಪುತ್ತೂರಿನ ಕೆಲಭಾಗಗಳಲ್ಲಿಯೂ ಮಳೆಯಾಗಿದ್ದು,ಕಬಕ, ನೇರಳಕಟ್ಟೆ, ಕೆದಿಲ ಸಹಿತ ಹಲವು ಭಾಗಗಳಲ್ಲಿ ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಬಂಟ್ವಾಳ, ಸುಳ್ಯ ಕಡೆಗಳಲ್ಲಿ ಮೋಡ ಮುಸುಕಿದ ವಾತಾವರಣ ಕಂಡು ಬಂದಿತ್ತು. ಮಾ.15ರಿಂದ 17ರವರೆಗೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ. ಭಾರತೀಯ ಹವಾಮಾನ ಇಲಾಖೆಯು “ಎಲ್ಲೋ ಅಲರ್ಟ್” ಘೋಷಿಸಿದೆ.

Related posts

ಮಡಿಕೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಪೊಲೀಸ್ ವಶಕ್ಕೆ

ಮಡಿಕೇರಿ: ವರ್ತಕನ ಮೇಲೆ ಗುಂಡಿನ ದಾಳಿ

ಪ್ರವೀಣ್ ನೆಟ್ಟಾರ್ ಹತ್ಯೆ ಹಿಂದಿನ ಅಸಲಿ ಕಾರಣ ಬಹಿರಂಗ