ನ್ಯೂಸ್ ನಾಟೌಟ್: ಅಪಾರ ಪ್ರಮಾಣದ ಚಿನ್ನವನ್ನು ಅಕ್ರಮವಾಗಿ ಸಾಗಿಸಿ ಬಂಧಿತಳಾಗಿರುವ ನಟಿ ರನ್ಯಾ ರಾವ್ ಗೆ ರಾಜ್ಯದ ಪ್ರಭಾವಿ ರಾಜಕೀಯ ನಾಯಕರ ನಂಟಿರುವ ಆರೋಪದ ಬೆನ್ನಲ್ಲೇ 2023ರಲ್ಲಿ ಕೆಐಎಡಿಬಿಯಿಂದ 12 ಎಕರೆ ಜಮೀನು ಮಂಜೂರು ಆಗಿರುವುದು ಬೆಳಕಿಗೆ ಬಂದಿದೆ.
ಡಿಆರ್ ಐ ಅಧಿಕಾರಿಗಳ ವಶದಲ್ಲಿರುವ ನಟಿ ರನ್ಯಾ ವಿಚಾರಣೆಯಲ್ಲಿ ಕೆಲವೊಂದು ಸ್ಫೋಟಕ ಮಾಹಿತಿ ಹೊರಬರುತ್ತಿದ್ದು, ಈಕೆ ನಿರ್ದೇಶಕಿ ಆಗಿರುವ ಕ್ಸಿರೋಡಾ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಗೆ ಸರ್ಕಾರದಿಂದಲೇ 12 ಎಕರೆ ಜಾಗ ಮುಂಜೂರು ಮಾಡಲಾಗಿದೆ. ರನ್ಯಾ 2022ರ ಎಪ್ರಿಲ್ ನಲ್ಲಿ ಬೆಂಗಳೂರಿನಲ್ಲಿ ಕಂಪೆನಿ ಸ್ಥಾಪನೆ ಮಾಡಿದ್ದು, ಆಕೆ ಹಾಗೂ ಸಹೋದರ ನಿರ್ದೇಶಕರಾಗಿದ್ದರು. ಈ ಕಂಪೆನಿ ಹೆಸರಿನಲ್ಲಿ ತುಮಕೂರಿನ ಶಿರಾ ಕೈಗಾರಿಕಾ ಪ್ರದೇಶದಲ್ಲಿ ಸ್ಟೀಲ್, ಟಿಎಟಿ ಬಾರ್ ಉತ್ಪಾದನೆ ಘಟಕ ತೆರೆಯಲು ಜಾಗ ನೀಡುವಂತೆ ಸರ್ಕಾರವನ್ನು ಕೋರಿದ್ದರು.
ಆದರೆ ಅರ್ಜಿ ಹಾಕಿದ ಕೇವಲ 10 ತಿಂಗಳಲ್ಲೇ ತುಮಕೂರಿನ ಶಿರಾ ಕೈಗಾರಿಕಾ ಪ್ರದೇಶದಲ್ಲಿ ಬರೋಬರಿ ನೂರಾರು ಕೋಟಿ ರೂ. ಮೌಲ್ಯದ 12 ಎಕರೆ ಜಮೀನನ್ನು ಕೆಐಎಡಿಬಿ ಮಂಜೂರು ಮಾಡಿತ್ತು. ಹೀಗಾಗಿ ಪ್ರಭಾವಿ ರಾಜಕಾರಣಿಗಳ ಸಂಪರ್ಕ ಇಲ್ಲದೆ ಸರ್ಕಾರಿ ಜಮೀನು ಪಡೆಯುವುದು ಅಷ್ಟು ಸುಲಭವಲ್ಲ. ಅಂದರೆ ರನ್ಯಾಗೆ ಪ್ರಭಾವಿ ರಾಜಕಾರಣಿಗಳು ಹಾಗೂ ವ್ಯಕ್ತಿಗಳ ಸಂಪರ್ಕ ಇರುವುದರಿಂದಲೇ ಕಂಪೆನಿಗೆ ಸರ್ಕಾರಿ ಜಮೀನು ಲಭಿಸಿದೆ ಎಂಬ ಚರ್ಚೆಗಳು ಆರಂಭವಾಗಿವೆ. ಚಿನ್ನ ಕಳ್ಳ ಸಾಗಣೆ ಹಿಂದೆ ಈ ಪ್ರಭಾವಿ ರಾಜಕಾರಣಿಗಳಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.