ಇತ್ತೀಚೆಗಷ್ಟೇ ಕಾಂತಾರ ಸಿನಿಮಾ ತೆರೆ ಕಂಡಿದ್ದು ಭರ್ಜರಿ ಪ್ರದರ್ಶನ ಕಾಣುತ್ತಿದೆ.ಇದರ ಬೆನ್ನಲ್ಲೇ ಚಿತ್ರದ ನಿರ್ದೇಶಕ ಹಾಗೂ ನಾಯಕ ನಟ ರಿಷಬ್ ಶೆಟ್ಟಿ ಅವರ ವಿಡಿಯೋವೊಂದು ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೂ ಕಾರಣವಾಗಿದೆ.
ಏನಿದು ವಿಡಿಯೋ?
ರಿಷಬ್ ಶೆಟ್ಟಿ ಖಾಸಗಿ ಸುದ್ದಿ ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನವೊಂದರಲ್ಲಿ ಅವರಿಗೆ ಚುಕುಟು ಪ್ರಶ್ನೆಗಳನ್ನು ಕೇಳಲಾಗಿತ್ತು.ಈ ವಿಡಿಯೋದಲ್ಲಿ ನಿರೂಪಕಿ ಚುಟುಕು ಪ್ರಶ್ನೋತ್ತರ ನಡೆಸುತ್ತ ನಟ ಉಪೇಂದ್ರ, ಸುದೀಪ್, ರಕ್ಷಿತ್ ಶೆಟ್ಟಿ ಅವರ ಬಗ್ಗೆ ನಿಮ್ಮ ಅಭಿಪ್ರಾಯವೇನು ಎನ್ನುವ ಪ್ರಶ್ನೆ ಕೇಳುತ್ತಲೇ ನಿರೂಪಕಿ ನರೇಂದ್ರ ಮೋದಿಯವರ ಬಗ್ಗೆಯೂ ನಿಮ್ಮ ಅಭಿಪ್ರಾಯವೇನು ಎಂದು ಕೇಳುತ್ತಾರೆ. ಅದಕ್ಕೆ ಉತ್ತರಿಸುವ ರಿಷಬ್, “ನರೇಂದ್ರ ಮೋದಿ ಅದ್ಭುತ ನಾಯಕ” ಎನ್ನುತ್ತಾರೆ. ಇದಾದ ಬಳಿಕ ನಿರೂಪಕಿ ‘ರಾಹುಲ್ ಗಾಂಧಿ ಬಗ್ಗೆ ನಿಮ್ಮ ಅನಿಸಿಕೆ ಏನು’ ಎಂದು ಮರು ಪ್ರಶ್ನೆ ಹಾಕುತ್ತಾರೆ. ಅದಕ್ಕೆ “ನೋ ಕಾಮೆಂಟ್ಸ್” ಎನ್ನುವ ಉತ್ತರ ನೀಡುತ್ತಾರೆ.
ರಿಷಬ್ ಶೆಟ್ಟಿಯವರ ಈ ‘ನೋ ಕಾಮೆಂಟ್ಸ್’ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ರಾಹುಲ್ ಗಾಂಧಿ ಅಭಿಮಾನಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರು “ರಿಷಬ್ ಶೆಟ್ಟಿ ಕೊನೆಗೂ ಅಸಲಿ ಬಣ್ಣವನ್ನು ತೋರಿಸಿಯೇ ಬಿಟ್ಟರು” ಎಂದು ಆಕ್ರೋಶ ಹೊರಹಾಕಿದ್ದಾರೆ.
ಶೆಟ್ರು ಹೇಳಿಕೆಗೆ ಅಸಮಾಧಾನ:
ಲೋಹಿತ್ ಎಂಬವರು ಅಸಮಾಧಾನ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದು, “ಸಂದರ್ಶಕಿ ನರೇಂದ್ರ ಮೋದಿ ಎಂದಾಗ ಮಹಾನ್ ನಾಯಕ ಎನ್ನುವ ರಿಷಬ್ ಶೆಟ್ಟಿ ,ಅದೇ ರಾಹುಲ್ ಗಾಂಧಿ ಬಗ್ಗೆ ಕೇಳಿದಾಗ ‘ನೋ ಕಾಮೆಂಟ್ಸ್’ ಎನ್ನುತ್ತಾರೆ. ಶೆಟ್ರು ಗುರುಕುಲ ಪದ್ಧತಿ ಜಾರಿಗೆ ಬರಬೇಕು ಅಂದಾಗಲೇ ನಮಗೆ ಅರ್ಥ ಆಗಬೇಕಿತ್ತು , ಒಳಗಡೆ ಒಬ್ಬ ಸಂಘಿ ಇದ್ದಾನೆ ಅಂತ ” ಎಂದು ಕಿಡಿಕಾರಿದ್ದಾರೆ.
ಮತ್ತೊಂದೆಡೆ ಚಿತ್ರ ನಟರನ್ನು ರಾಜಕೀಯ ವಿಚಾರಗಳಿಗೆ ಡಿಕ್ಕಿ ಹೊಡೆಸಿ ಮಜಾ ಪಡೆಯುವ ಖಾಸಗಿ ಚಾನೆಲ್ ಗಳ ವಿರುದ್ದವೂ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಚಿತ್ರ ನಟರಿಗೆ ಚಿತ್ರಗಳ ಬಗ್ಗೆ ಪ್ರಶ್ನೆ ಕೇಳುವ ಬದಲು ರಾಜಕೀಯ ಪ್ರಶ್ನೆಗಳನ್ನು ಕೇಳಿ ಸಂದಿಗ್ಧತೆಯಲ್ಲಿ ಸಿಲುಕಿಸುವುದು ಎಷ್ಟು ಸರಿ? ಅನ್ನೋ ಪ್ರಶ್ನೆಗಳು ಕೇಳಿಬರುತ್ತಿವೆ.