ನ್ಯೂಸ್ ನಾಟೌಟ್: ಒಡಿಶಾದಲ್ಲಿ ನಡೆದಿದ್ದ ಅತ್ಯಂತ ಭೀಕರ ತ್ರಿವಳಿ ರೈಲು ದುರಂತಕ್ಕೆ ಸಂಬಂಧಿಸಿದಂತೆ ಒಟ್ಟು ಮೂವರು ರೈಲ್ವೆ ಉದ್ಯೋಗಿಗಳನ್ನು ಸಿಬಿಐ ಶುಕ್ರವಾರ ಬಂಧಿಸಿದೆ ಎಂದು ಸುದ್ದಿಸಂಸ್ಥೆ ಎಎನ್‌ಐ ಟ್ವೀಟ್ ಮಾಡಿದೆ.
ಹಿರಿಯ ವಲಯ ಎಂಜಿನಿಯರ್ ಅರುಣ್ ಕುಮಾರ್ ಮೋಹಾಂತ್, ವಲಯ ಎಂಜಿನಿಯರ್ ಮೊಹಮದ್ ಅಮಿರ್ ಖಾನ್, ಟೆಕ್ನಿಷಿಯನ್ ಪಪ್ಪು ಕುಮಾರ್ ಎಂಬುವವರು ಬಂಧಿತರು. ಒಡಿಶಾ ರೈಲ್ವೆ ದುರಂತಕ್ಕೆ ಸಂಬಂಧಿಸಿದಂತೆ ಮೊದಲ ಬಾರಿಗೆ ಆರೋಪಿಗಳ ಬಂಧನವಾಗಿದೆ.
ಇವರ ವಿರುದ್ಧ ಸಿಆರ್‌ಪಿಸಿ ಸೆಕ್ಷನ್ 304 ಹಾಗೂ 201 ಅಡಿ ಪ್ರಕರಣ ದಾಖಲಿಸಲಾಗಿದೆ. ಜೂನ್ 2 ರಂದು ಒಡಿಶಾದ ಬಾಲೇಶ್ವರ್ ಜಿಲ್ಲೆಯ ಬಹನಾಗ್ ರೈಲು ನಿಲ್ದಾಣದ ಬಳಿ ಕೊಲ್ಕತ್ದಿಂದ ಚೆನ್ನೈಗೆ ಹೊರಟಿದ್ದ ಕೊರೋಮಂಡಲ್ ಎಕ್ಸ್‌ಪ್ರೆಸ್ ರೈಲು ಸರಕು ಸಾಗಣೆ ರೈಲಿಗೆ ಡಿಕ್ಕಿ ಹೊಡೆದಿತ್ತು. ಈ ವೇಳೆ ಇದೇ ಮಾರ್ಗದ ಪಕ್ಕದ ಟ್ರ್ಯಾಕ್‌ನಲ್ಲಿ ಸಂಚರಿಸುತ್ತಿದ್ದ ಬೆಂಗಳೂರು– ಹೌರಾ ಎಕ್ಸ್‌ಪ್ರೆಸ್ ರೈಲಿಗೂ ಡಿಕ್ಕಿಯಾಗಿತ್ತು. ಘಟನೆಯಲ್ಲಿ 291 ಪ್ರಯಾಣಿಕರು ಮೃತಪಟ್ಟು, ಸಾವಿರಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಘಟನೆಯಾದ ಮೂರು ದಿನಗಳ ನಂತರ ಈ ಪ್ರಕರಣದ ತನಿಖೆಯನ್ನು ರೈಲ್ವೆ ಮಂಡಳಿ ಸಿಬಿಐಗೆ ವಹಿಸಿತ್ತು. ಮಾನವ ಲೋಪವೇ ಈ ಭೀಕರ ದುರಂತಕ್ಕೆ ಕಾರಣ ಎಂದು ಸಿಬಿಐನ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.