ನ್ಯೂಸ್ ನಾಟೌಟ್: ಸುಳ್ಯ ತಾಲೂಕು ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ 8ನೇ ವಾರ್ಷಿಕೋತ್ಸವದ ಅಂಗವಾಗಿ ಅಮೆಚೂರು ಕಬಡ್ಡಿ ಫೆಡರೇಶನ್ ಆಫ್ ಇಂಡಿಯಾ ಸಹಭಾಗಿತ್ವದಲ್ಲಿನ. 17 ಮತ್ತು 18 ರಂದು ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ಸುಳ್ಯ ಪ್ರಭು ಮೈದಾನದಲ್ಲಿ ನಡೆಯಲಿದೆ ಎಂದು ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷ ಶಿವಪ್ರಕಾಶ್ ಸುಳ್ಯ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಘದ ವಾರ್ಷಿಕೋತ್ಸವದ ಅಂಗವಾಗಿ ಈ ಬಾರಿ ಸುಳ್ಯದಲ್ಲಿ ವಿಶೇಷವಾಗಿ ರಾಷ್ಟ್ರೀಯ ಮಟ್ಟದ ಆಟಗಾರರ 8 ಆಹ್ವಾನಿತ ತಂಡಗಳ ಎ ಗ್ರೇಡ್ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ ಆಯೋಜಿಸಲಾಗಿದೆ. ಕಳೆದ ವರ್ಷ ಯುವಜನ ಸಂಯುಕ್ತ ಮಂಡಳಿಯ ಎದುರಿನ ಮೈದಾನದಲ್ಲಿ ಕಬಡ್ಡಿ ಪಂದ್ಯಾಟ ನಡೆಸಲಾಗಿತ್ತು. ಈ ಬಾರಿ ವಿಶೇಷವಾಗಿ ಪ್ರೋಕಬಡ್ಡಿ ಮಾದರಿಯ ಪಂದ್ಯಾಟ ನಡೆಸುವ ಕಾರಣಕ್ಕಾಗಿ ಸ್ಥಳದ ಕೊರತೆಯಾಗದಂತೆ ಪ್ರಭು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಬಡ್ಡಿ ಪಂದ್ಯಾಟದ ಸಮಿತಿಯ ಅಧ್ಯಕ್ಷ ಭಾರತ ಶಾಮಿಯಾನ ಮಾಲಕ ಸಂಶುದ್ದೀನ್ ಜಿ.ಪಿ. ಮಾತನಾಡಿ, ಕಳೆದ ವರ್ಷ ಆಯೋಜಿಸಿದ ಪಂದ್ಯಾಟ ಯಶಸ್ವಿಯಾಗಿದ್ದು, ಈ ಬಾರಿ ವಿಶೇಷವಾಗಿ ರಾಷ್ಟ್ರಮಟ್ಟದ ಆಟಗಾರರನ್ನು ಕರೆಸಿಕೊಂಡು ಪಂದ್ಯಾಟದ ಆಯೋಜಿಸಲಾಗಿದೆ. ಕರ್ನಾಟಕ ಕೇರಳ, ತಮಿಳುನಾಡು, ಮಹಾರಾಷ್ಟ್ರ, ಹಿಮಾಚಲ ಪ್ರದೇಶ ಹರಿಯಾಣ, ದೆಹಲಿ ರಾಜ್ಯಗಳಿಂದ ಆಟಗಾರರು ಆಗಮಿಸಲಿದ್ದಾರೆ. ಪಂದ್ಯಾಟ ಸಂಪೂರ್ಣವಾಗಿ ಪ್ರೊ ಕಬಡ್ಡಿ ಮಾದರಿಯಲ್ಲಿ ಆಧುನಿಕ ಸ್ಪರ್ಶ ನೀಡಲಾಗುವುದು ಎಂದು ತಿಳಿಸಿದರು.
ಕ್ರೀಡಾಂಗಣದ 4 ಬದಿಯಲ್ಲಿ ಗ್ಯಾಲರಿ ವ್ಯವಸ್ಥೆ ಹಾಗೂ ಇನ್‌ಡೋರ್ ಸ್ಟೇಡಿಯಂ ಮಾದರಿಯಲ್ಲಿ ಕ್ರೀಡಾಂಗಣವನ್ನು ಸಜ್ಜುಗೊಳಿಸಲಾಗುವುದು. ಮಳೆ ಬಂದರೂ ಕ್ರೀಡಾಭಿಮಾನಿಗಳಿಗೆ ತೊಂದರೆಯಾಗದ ರೀತಿಯಲ್ಲಿ ಸಂಪೂರ್ಣ ವಾಟರ್ ಪ್ರೂಫ್ ಸ್ಟೇಡಿಯಂ ನಿರ್ಮಿಸಲಾಗುವುದು. ನಾಲ್ಕು ಸಾವಿರ ಮಂದಿ ಕುಳಿತುಕೊಳ್ಳುವ ಗ್ಯಾಲರಿ ನಿರ್ಮಾಣ, ಎಲ್.ಇ.ಡಿ ಪರದೆಗಳನ್ನು ಅಳವಡಿಸಲಾಗುವುದು. ಲೀಗ್ ಮಾದರಿಯಲ್ಲಿ ಪಂದ್ಯಾಟವಾಗಿದ್ದು ಸಮರ್ಥ ಆಟಗಾರರು ಭಾಗವಹಿಸಲಿದ್ದಾರೆ ಎಂದು ಸಂಶುದ್ದೀನ್ ಜಿ.ಪಿ. ತಿಳಿಸಿದರು.