ನ್ಯೂಸ್ ನಾಟೌಟ್: ವಿರಾಟ್ ಹಿಂದೂ ಸಮಾವೇಶದ ಸಿದ್ಧತೆಯಲ್ಲಿ ತೊಡಗಿದ್ದ ಶ್ರೀರಾಮ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ಮುಖಂಡನ ಮೇಲೆ ಬೆಳಗಾವಿಯ ಹಿಂಡಲಗಾ ಗ್ರಾಮದಲ್ಲಿ ಶನಿವಾರ ರಾತ್ರಿ ಗುಂಡಿನ ದಾಳಿ ನಡೆದಿದೆ.
ಶ್ರೀರಾಮ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ರವಿ ಕೋಕಿತ್ಕರ್ ಹಾಗೂ ಹಿಂದೂ ರಾಷ್ಟ್ರ ಸೇನಾ ಮುಖಂಡ ಮನೋಜ್ ದೇಸೂರಕರ್ ಗುಂಡೇಟಿನಿಂದ ಗಾಯಗೊಂಡವರು. ರವಿ ಅವರ ಕುತ್ತಿಗೆ ಭಾಗಕ್ಕೆ ಗುಂಡು ತಗಲಿದ್ದು, ತೀವ್ರ ರಕ್ತಸ್ರಾವವಾಗಿದೆ. ಮನೋಜ್ ಅವರ ಕೈಯಲ್ಲಿ ಗುಂಡು ಹೊಕ್ಕಿದೆ. ಇಬ್ಬರನ್ನೂ ಇಲ್ಲಿನ ಕೆಎಲ್‌ಇ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಗರದಲ್ಲಿ ಜನವರಿ 8ರಂದು ಶ್ರೀರಾಮ ಸೇನೆಯಿಂದ ವಿರಾಟ್ ಹಿಂದೂ ಸಮಾವೇಶದ ಸಿದ್ಧತೆ ಮಾಡಲಾಗಿದೆ. ಇದರ ನೇತೃತ್ವ ವಹಿಸಿದ ರವಿ ಹಾಗೂ ಅವರ ಸಹವರ್ತಿ ಮನೋಜ್ ಸೇರಿಕೊಂಡು ರಾತ್ರಿ 8ರ ಸುಮಾರಿಗೆ ಕಾರಿನಲ್ಲಿ ಸ್ಥಳಕ್ಕೆ ಹೊರಟಿದ್ದರು. ಕಾರು ಹಿಂಡಲಗಾದ ಮರಾಠಿ ಸರ್ಕಾರಿ ಶಾಲೆಯ ಬಳಿ ಬಂದಾಗ, ಅಲ್ಲೇ ಕಾಯುತ್ತ ನಿಂತಿದ್ದ ಇಬ್ಬರು ದುಷ್ಕರ್ಮಿಗಳು ಏಕಾಏಕಿ ಗುಂಡಿನ ದಾಳಿ ನಡೆಸಿದರು.
ಮುಂದಿನ ಎಡಬದಿ ಸೀಟಿನಲ್ಲಿ ಕುಳಿತಿದ್ದ ರವಿ ಅವರ ಕುತ್ತಿಗೆಯ ಕೆಳಭಾಗಕ್ಕೆ ತಾಗಿ ದಾಟಿದ ಗುಂಡು, ಕಾರು ಓಡಿಸುತ್ತಿದ್ದ ಮನೋಜ್ ಅವರ ಕೈಗೆ ಸಿಕ್ಕಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಗುಂಡೇಟು ಬಿದ್ದ ತಕ್ಷಣ ದುಷ್ಕರ್ಮಿಗಳು ಬೈಕ್ ಹತ್ತಿ ಪರಾರಿಯಾದರು. ಸ್ಥಳದಲ್ಲಿ ಸೇರಿದ ಜನ ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸಲು ನೆರವಾದರು. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಹೆಚ್ಚಿನ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಶ್ರೀರಾಮ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ರವಿ ಕೋಕಿತ್ಕರ್ ಹಾಗೂ ಮನೋಜ್ ದೇಸೂರಕರ್ ಮೇಲೆ ನಡೆದ ಗುಂಡಿನ ದಾಳಿ ಖಂಡನಾರ್ಹ. ನಿಮ್ಮ ಗುಂಡಿನ ದಾಳಿ, ಬಾಂಬ್, ಕತ್ತಿಗಳ ದಾಳಿಗೆ ನಾವು ಹೆದರುವುದಿಲ್ಲ. ಈ ಘಟನೆ ಖಂಡಿಸಿ ಭಾನುವಾರ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಾಗುವುದು’ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.